ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪಾವತಿಯನ್ನು ಶೇಕಡಾ 2 ರಷ್ಟು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಅನ್ನು ಶೇಕಡಾ 53 ರಿಂದ 55 ಕ್ಕೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಅನ್ನು ಶೇಕಡಾ 2 ರಿಂದ 55 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ 6614.04 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ.
ಈ ಹೆಚ್ಚಳವು ಜನವರಿ 1, 2025 ರಿಂದ ಜಾರಿಗೆ ಬರಲಿದೆ. ಇದರರ್ಥ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಜನವರಿ-ಮಾರ್ಚ್ ಅವಧಿಗೆ ಮೂರು ತಿಂಗಳ ಡಿಎ ಹೆಚ್ಚಳವನ್ನು ತಮ್ಮ ಏಪ್ರಿಲ್ ವೇತನದೊಂದಿಗೆ ಬಾಕಿಯಾಗಿ ಪಡೆಯುತ್ತಾರೆ.
ಹಣದುಬ್ಬರ ಪ್ರವೃತ್ತಿಗೆ ಅನುಗುಣವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಗಳನ್ನು ವರ್ಷದಲ್ಲಿ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಜುಲೈನಲ್ಲಿ ಇದನ್ನು ಶೇ.3ರಷ್ಟು ಹೆಚ್ಚಿಸಲಾಗಿತ್ತು.
ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಪಾವತಿ ಹೆಚ್ಚಳವು ಸುಮಾರು 48.66 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 66.55 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
ಡಿಎಯನ್ನು ಶೇಕಡಾ 2 ರಷ್ಟು ಹೆಚ್ಚಿಸುವ ಕ್ಯಾಬಿನೆಟ್ ನಿರ್ಧಾರವು ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕಾರಾರ್ಹ ಸೂತ್ರಕ್ಕೆ ಅನುಗುಣವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು