ಬೆಂಗಳೂರು : ರಾಜ್ಯಾದ್ಯಂತ ಪರೀಕ್ಷೆಗೆ ಒಳಪಡಿಸಲಾದ 235 ಕೇಕ್ ಮಾದರಿಗಳ ಪೈಕಿ 12ರಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಕರ್ನಾಟಕದ ಕೇಕ್ ಪ್ರಿಯರಿಗೆ ಎಚ್ಚರಿಕೆ ನೀಡಿದೆ.
ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್ ಸೇರಿದಂತೆ ಜನಪ್ರಿಯ ಕೇಕ್ ಪ್ರಭೇದಗಳಲ್ಲಿ ಹಾನಿಕಾರಕ ಪದಾರ್ಥಗಳು ಪತ್ತೆಯಾಗಿವೆ ಎಂದು FSSAI ಬಹಿರಂಗಪಡಿಸಿದೆ.ಬೇಕರಿ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ, ಕ್ಯಾನ್ಸರ್ ಗೆ ಕಾರಣವಾಗುವ ಯಾವುದೇ ರಾಸಾಯನಿಕ ಅಥವಾ ಬಣ್ಣಗಳನ್ನು ಕೇಕ್ ಗಳಲ್ಲಿ ಬಳಸಬಾರದು. ರಾಜ್ಯಾದ್ಯಂತ ಕೇಕ್ಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂಬ ಶಂಕೆಯಿಂದಾಗಿ 235 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವುಗಳಲ್ಲಿ 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್ಸೆಟ್ ಯೆಲ್ಲೋ, ಪೊನ್ಸೆಯು 4ಆರ್ ಮತ್ತು ಕಾರ್ಮೋಸಿನ್ನಂತಹ ಹಾನಿಕಾರಕ ಅಂಶಗಳು ಕಂಡುಬಂದಿವೆ.
ಈ ಹಿಂದೆ ಆಹಾರ ಸುರಕ್ಷತಾ ಇಲಾಖೆಯು ಗೋಬಿ ಮಂಚೂರಿಯನ್, ಕಬಾಬ್, ಪಾನಿ ಪುರಿಯಂತಹ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಕೇಕ್ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಹೆಚ್ಚಾಗಿ ಬಳಸುವುದರಿಂದ, ಇಲಾಖೆಯು ಈಗ ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್ ಕೇಕ್ಗಳಲ್ಲಿ ಅವುಗಳ ಬಳಕೆಯನ್ನು ನಿಷೇಧಿಸಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಕ್ ತಯಾರಕರಿಗೆ ಎಚ್ಚರಿಕೆ ನೀಡಲಾಗಿದೆ.