ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜಿಲ್ಲೆಯ ಎಲ್ಲ ವೈದ್ಯಕೀಯ ಕಾಲೇಜುಗಳಿಗೂ ಸೂಚನೆ ನೀಡಲಾಗಿದ್ದು, ಈ ರೋಗಕ್ಕೆ ಸಂಬಂಧಪಟ್ಟ ಲಕ್ಷಣ ಹೊಂದಿದ ರೋಗಿಗಳು ಚಿಕಿತ್ಸೆಗೆ ಬಂದರೆ ಮಾಹಿತಿ ನೀಡಲು ಸೂಚಿಸಲಾಗಿದೆ. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ರೋಗ ಪತ್ತೆಯಾಗದಿದ್ದರೂ ಗಡಿಭಾಗದಲ್ಲೂ ಎಚ್ಚರ ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬಂದಿಗೆ ಮೇ 20ರಿಂದ ಕೆಲವು ದಿನಗಳ ಕಾಲ ತರಬೇತಿ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಡಿಎಚ್‌ಒ ಡಾ| ಎಚ್.ಆರ್. ತಿಮ್ಮಯ್ಯ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ. ವೆಸ್ಟ್‌ನೈಲ್ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಬಾಧಿತರಿಗೆ ಹೆಚ್ಚಾಗಿ ಜ್ವರ, ತಲೆನೋವು, ಸುಸ್ತು, ದೇಹದ ವಿವಿಧ ಭಾಗಗಳಲ್ಲಿ ನೋವು, ವಾಕರಿಕೆ, ವಾಂತಿ, ಮೂರ್ಚೆ, ಚರ್ಮದ ಮೇಲೆ ದದ್ದು ನಡುಕ, ಕುತ್ತಿಗೆ ಬಿಗಿತ ಇತ್ಯಾದಿ ಲಕ್ಷಣ ಗೋಚರಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.