ಬೆಂಗಳೂರು: ಕೇರಳದ ವಾಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಭೀಕರ ದುರಂತದಲ್ಲಿ ಕರ್ನಾಟಕ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಾಮರಾಜನಗರ ಜಿಲ್ಲೆಯ ಇರಸವಾಡಿ ಗ್ರಾಮದ ರಾಜೇಂದ್ರ (50), ರತ್ನಮ್ಮ (45), ಪುಟ್ಟಸಿದ್ದಶೆಟ್ಟಿ (62), ರಾಣಿ (50 ಮೃತಪಟ್ಟಿದ್ದಾರೆ. ರಾಜೇಂದ್ರ ಮತ್ತು ರತ್ನಮ್ಮ ದಂಪತಿ ಮೂಲತಃ ಚಾಮರಾಜನಗರ ತಾಲೂಕಿನ ಇರಸವಾಡಿ ನಿವಾಸಿಗಳಾಗಿದ್ದು, ವಯನಾಡಿನ ಚೂರಲ್ ಮಲೈನಲ್ಲಿ ವಾಸವಾಗಿದ್ದರು. ಕೂಲಿ ಮಾಡಿ ಕೇರಳದಲ್ಲಿ ಬದುಕು ಕಟ್ಟಿಕೊಂಡಿದ್ದ ದಂಪತಿ ಆರು ತಿಂಗಳ ಹಿಂದೆಯಷ್ಟೇ ಹೊಸಮನೆ ಖರೀದಿಸಿದ್ದರು. ಸಂಬಂಧಿಕರು, ಸ್ನೇಹಿತರನ್ನು ಕರೆದು ಗೃಹಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದರು. ಈಗ ದುರಂತದಲ್ಲಿ ದಂಪತಿ ಮನೆ ಸಮೇತ ಜಲಸಮಾಧಿಯಾಗಿದ್ದಾರೆ. ಈ ಇಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದರ ಮಧ್ಯೆ ಮಂಡ್ಯ ಜಿಲ್ಲೆ ಕೆಆರ್ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿರಾಣಿ ಕುಟುಂಬ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಝಾನಿರಾಣಿ ಪುತ್ರ ನಿಹಾಲ್ (2.5), ಅತ್ತೆ ಲೀಲಾವತಿ (55) ನಾಪತ್ತೆ ಆಗಿದ್ದಾರೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವರಿಗೆ ಝಾನ್ಸಿರಾಣಿಯನ್ನು ಮದುವೆ ಮಾಡಿಕೊಟ್ಟಿದ್ದರು. ಅನಿಲ್ ಕೇರಳದ ಮುಂಡಕೈಯಲ್ಲಿ ನೆಲೆಸಿದ್ದರು. ಪತ್ನಿ ಝಾನ್ಸಿ, ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ಜೊತೆ ವಾಸವಿದ್ದರು. ಅನಿಲ್ ಹಾಗೂ ಲೀಲಾವತಿ ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಮತ್ತೊಂದೆಡೆ ಗಂಭೀರವಾಗಿ ಗಾಯಗೊಂಡಿರುವ ಅನಿಲ್ ಹಾಗೂ ಅವರ ಪತ್ನಿ ಝಾನ್ಸಿ, ತಂದೆ ದೇವರಾಜು ಅವರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಿದೆ. ಇತ್ತ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
