ಕಣ್ಣೂರು : ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಟಿ.ಜೆ.ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 13 ವರ್ಷಗಳ ಬಳಿಕ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬುಧವಾರ ಕಣ್ಣೂರಿನಲ್ಲಿ ಪ್ರಮುಖ ಶಂಕಿತ ಸವದ್‌ನನ್ನು ಬಂಧಿಸಿದೆ.
ಬಂಧಿತನನ್ನು ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯ ಸವಾದ್ ಎಂದು ಗುರುತಿಸಲಾಗಿದೆ. ಆರೋಪಿದ ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇದೀಗ ಎನ್ಐಎ ಅರೆಸ್ಟ್ ಮಾಡಿದೆ. ಸವಾದ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬುಧವಾರ ಕೊಚ್ಚಿಗೆ ಕರೆದುಕೊಂಡು ಹೋಗಿದ್ದಾರೆ. ಸವಾದ್ ಸೇರಿದಂತೆ ಪಿಎಫ್ಐ ಬೆಂಬಲಿತ 7 ಮಂದಿಯ ತಂಡವೊಂದು ತೊಡುಪುಳದ ನ್ಯೂಮನ್ ಕಾಲೇಜಿನ ಮಲೆಯಾಳಂ ಪ್ರಾಧ್ಯಾಪಕ ಜೋಸೆಪ್ ಅವರನ್ನು ಮಾವಟ್ಟುಪುಳದಲ್ಲಿರುವ ಅವರ ಮನೆಯ ಸಮೀಪ ಕಾರಿನಿಂದ ಹೊರಗೆ ಎಳೆದು ಹಾಕಿ ಕೈ ಕತ್ತರಿಸಿತ್ತು. 2010 ಜುಲೈ 10ರಂದು ಈ ಘಟನೆ ನಡೆದಿತ್ತು. ಅನಂತರ ಎರ್ನಾಕುಳಂನ ಅಸಮನ್ನೂರ್ನ ನಿವಾಸಿ ಸವಾದ್ (38) ತಲೆ ಮರೆಸಿಕೊಂಡಿದ್ದ.
2015ರ ಏಪ್ರಿಲ್‌ನಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ 13 ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ವಿಚಾರಣಾ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯವು ಇತರ ಮೂವರು ಅಪರಾಧಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.