ಚಿತ್ರದುರ್ಗ: ಪಾಳು ಮನೆಯೊಂದರಲ್ಲಿ ಐವರ ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದ ಎಫ್ಎಸ್ಎಲ್ ವರದಿ ಬಂದಿದ್ದು, ಐವರೂ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ಪತ್ತೆಯಾಗಿರುತ್ತದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಈ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು, ಐವರ ಸಾವಿಗೆ ಅತಿಯಾದ ನಿದ್ರೆ ಮಾತ್ರೆ ಸೇವನೆಯೇ ಕಾರಣ ಎಂಬುದಾಗಿ ವರದಿ ತಿಳಿಸಿದೆ. ಕಳೆದ ಡಿ.28ರಂದು ಚಿತ್ರದುರ್ಗ ಕಾರಾಗೃಹ ರಸ್ತೆಯ ಪಾಳು ಮನೆಯಲ್ಲಿ ಐದು ಅಸ್ಥಿಪಂಜರಗಳು ಕಂಡುಬಂದಿದ್ದವು. ದಾವಣಗೆರೆ, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ 71 ಸಾಕ್ಷ್ಯ ಸಂಗ್ರಹ ಮಾಡಿದ್ದರು. ಅಡುಗೆ ಪಾತ್ರೆಯಲ್ಲಿ ಸಯನೈಡ್ ಅಂಶವಿರುದು ಕಂಡುಬಂದಿದೆ. ಪಾತ್ರೆಯಲ್ಲಿ ಇದ್ದ ಈ ಆಹಾರವನ್ನು ಸೇವಿಸಿರುವ ಖಚಿತತೆ ಇಲ್ಲ ಎಂದು ತಿಳಿಸಿದರು.
ಐವರ ಸಾವಿಗೆ ಕಾರಣ ತಿಳಿದುಕೊಳ್ಳುವ ಉದ್ದೇಶದಿಂದ ಎಲ್ಲಾ ಆಯಾಮದಲ್ಲೂ ಪರೀಕ್ಷೆ ನಡೆಸಲಾಯಿತು. ಆಗ ಐವರ ಅಸ್ಥಿಪಂಜರದಲ್ಲೂ ನಿದ್ರೆ ಮಾತ್ರೆಯ ಅಂಶವಿರುವುದು ಪತ್ತೆಯಾಗಿದೆ. ಗಾಯದಿಂದ ಮೃತಪಟ್ಟಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹೇಳಿದರು.
ಕೆಲವು ವಸ್ತುಗಳು ಯಾವುದೇ ಸಾಕ್ಷ್ಯವನ್ನು ಒದಗಿಸದಷ್ಟು ಹಾಳಾಗಿದ್ದವು. ಸ್ಥಳದಲ್ಲಿ ಕೆಲ ಔಷಧದ ಚೀಟಿ, ವೈದ್ಯಕೀಯ ವರದಿಗಳು ಪತ್ತೆಯಾಗಿದ್ದವು. ಇವುಗಳ ಆಧಾರದಲ್ಲಿ ಐವರೂ ದೈಹಿಕ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮಾನಸಿಕ ಸಮಸ್ಯೆಯಿಂದ ಪಡೆಯುತ್ತಿದ್ದ ಚಿಕಿತ್ಸೆ, ಸೇವಿಸುತ್ತಿದ್ದ ಔಷಧದ ಅಂಶಗಳನ್ನು ಪರೀಕ್ಷಿಸಲಾಗಿದೆ ಎಂದರು.
ಮನೆಯಲ್ಲಿ ದೊರೆತ ಔಷಧ ಚೀಟಿಯ ಹಿಂಬದಿಯಲ್ಲಿ ಬರೆದ ಅಪೂರ್ಣ ಪತ್ರವನ್ನು ಆಧರಿಸಿ ಬೆಂಗಳೂರಿನ ವ್ಯಕ್ತಿಯನ್ನು ವಿಚಾರಣೆ ನಡೆಸಲಾಯಿತು. ಆದರೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಕಾಗದದಲ್ಲಿರುವ ಬರಹ ಸಾವಿಗೂ ಮುನ್ನ ಬರೆದ ಪತ್ರವೇ ಎಂಬುದೂ ಖಚಿತವಾಗಿಲ್ಲ. ಇದರೊಂದಿಗೆ ಕೈಬರಹ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ತಿಳಿಸಿದರು.