ಬೆಂಗಳೂರು : ಅಂದುಕೊಂಡಂತೆ ಆಗಿದ್ದರೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಂತ್ರಿಯಾಗಬೇಕಿತ್ತು. ಅದಕ್ಕಾಗಿ ಅವರು ಏನೆಲ್ಲ ಕಸರತ್ತೂ ಮಾಡಿದ್ದರು.
ಆದರೂ, ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಇದೀಗ ಶಿವಲಿಂಗೇಗೌಡ ಅವರು ಮಂತ್ರಿಯಲ್ಲ, ಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲುತ್ತಿದ್ದಾರೆ.
ಮಂತ್ರಿಯಾಗುವುದಕ್ಕೆ ಪರದಾಡುತ್ತಿದ್ದವರು, ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹೌದು, ಶಾಸಕ ಶಿವಲಿಂಗೇಗೌಡರು ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಸದ್ದಿಲ್ಲದೇ ಅವರು ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ‘ನಮ್ ಶಾಲೆ’ ಹೆಸರಿನ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಗೀಜಿಹಳ್ಳಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರು ಭಾಗಿಯಾಗಿದ್ದಾರೆ.
ಈ ಸಿನಿಮಾದಲ್ಲಿ ಅವರು ಮುಖ್ಯಮಂತ್ರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಕಳೆದ ಹದಿನೈದು ದಿನಗಳಿಂದ ಗೀಜಿಹಳ್ಳಿಯಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.ಮುಖ್ಯಮಂತ್ರಿ ಪಾತ್ರದ ಅಭಿನಯದ ಜೊತೆಗೆ ಡಬ್ಬಿಂಗ್ ಮಾಡಲು ಶಿವಲಿಂಗೇಗೌಡರು ಒಪ್ಪಿಕೊಂಡಿದ್ದಾರಂತೆ. ಕೃಷ್ಣ ಬೆಳ್ತಂಗಡಿ ನಿರ್ದೇಶನದ, ರವಿ ಆಚಾರ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.