ಬೆಂಗಳೂರು: ಗುತ್ತಿಗೆದಾರನ ಮನೆ ಮೇಲೆ ನಡೆದ IT ರೇಡ್ ವೇಳೆ ಪತ್ತೆಯಾದ 42 ಕೋಟಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದು, ರಾಜ್ಯ ಸರ್ಕಾರ ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ ಎಂದು ಆರೋಪಿಸಿದೆ.
“ಕರ್ನಾಟಕವನ್ನು ಸಂಪೂರ್ಣ ಅಂಧಕಾರದಲ್ಲಿರಿಸಿರುವ ಕರ್ನಾಟಕ ಕಾಂಗ್ರೆಸ್ ಪಕ್ಷವೂ, ರಾಜ್ಯದ ಜನತೆಯ ಶ್ರಮದ ತೆರಿಗೆ ಹಣವನ್ನು, 80% ಕಮಿಷನ್ ರೂಪದಲ್ಲಿ ವಸೂಲಿ ಮಾಡಿ, ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಅಸಲಿ ಕರ್ನಾಟಕ ಮಾಡೆಲ್ ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಕಿಡಿಕಾರಿದೆ.
ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ ಎನ್ನುವುದಕ್ಕೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ದೊರೆತ ₹42 ಕೋಟಿ ಹಣವೇ ಪ್ರಮುಖ ಸಾಕ್ಷಿ. ರಾಜ್ಯವನ್ನು ಹಾಡುಹಗಲೇ ಈ ಪರಿ ಲೂಟಿ ಮಾಡುತ್ತಿರುವ ಈ ನಾಡದ್ರೋಹಿಗಳು, ಕರ್ನಾಟಕವನ್ನು ದಿವಾಳಿಯತ್ತ ಕೊಂಡೊಯ್ಯುವುದು ಗ್ಯಾರಂಟಿ ! ಎಂದು ಕುಹಕವಾಡಿದೆ.