ಶಿವಮೊಗ್ಗ : ತಮ್ಮ ಮಗ ಕಾಂತೇಶ್ ಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲವೆಂಬ ಒಂದೇ ಒಂದು ಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ಶಿವಮೊಗ್ಗ ಲೋಕಸಭೆ ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಬಂಡಾಯವೆದ್ದಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೊನೆಗೂ ತಮ್ಮ ನಾಮಪತ್ರವನ್ನು ಹಿಂಪಡೆಯದೇ ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಸಾರಿದ್ದು, ಶಿವಮೊಗ್ಗ ಕ್ಷೇತ್ರ ತುರುಸಿನ ಅಖಾಡ ಆಗಿ ಮಾರ್ಪಟ್ಟಂತಾಗಿದೆ.
ಎರಡನೇ ಹಂತದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನವಾದ ಇಂದು ಎಲ್ಲರ ಚಿತ್ತ ಈಶ್ವರಪ್ಪನವರ ನಡೆಯ ಮೇಲೆಯೇ ಇದ್ದಂತಿತ್ತು. ಆದರೂ ತಮ್ಮ ಹಠಕ್ಕೆ ಜೋತು ಬಿದ್ದ ಈಶ್ವರಪ್ಪ ಆರ್ ಎಸ್ ಎಸ್ ನವರು ಸೇರಿದಂತೆ ಬಿಜೆಪಿಯ ಹಿರಿಯ ನಾಯಕ ಡಿ.ಹೆಚ್.ಶಂಕರಮೂರ್ತಿಯಂಥವರು ತಿಳಿ ಹೇಳಿದರೂ ಕಿವಿಗೊಡದೇ ಕಣದಲ್ಲಿ ಉಳಿದುಕೊಂಡಿದ್ದು ಬಿಜೆಪಿಗೆ ತಲೆನೋವು ತಂದಿರಬಹುದು. ಆದರೆ, ಈ ಬಗ್ಗೆ ಏನೊಂದನ್ನೂ ಹೇಳದ ಮಾಜಿ ಸಿಎಂ ಯಡಿಯೂರಪ್ಪನವರು, ತಮ್ಮ ಮಗ ಮತ್ತು ಶಿವಮೊಗ್ಗದ ಹಾಲಿ ಸಂಸದ ರಾಘವೇಂದ್ರ ಅವರು ಲಕ್ಷ ಲಕ್ಷ ಅಧಿಕ ಮತಗಳ ಅಂತರದಲ್ಲಿ ಗೆಲ್ಲೋದು ಶತಸಿದ್ಧವೆಂದಷ್ಟೇ ಮಾರ್ಮಿಕವಾಗಿ ಹೇಳಿದ್ದಾರೆ. ಆದರೆ, ನಾಮಪತ್ರವನ್ನು ಹಿಂಪಡೆಯದೇ ಸಂಸದ ರಾಘವೇಂದ್ರ ಅವರನ್ನು ಸೋಲಿಸಿಯೇ ತೀರುವೆನೆಂದು ಗುಡುಗು ಹಾಕುತ್ತಿರೋ ಈಶ್ವರಪ್ಪ ಇಂದೂ ಕೂಡ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದು, 2013ರ ವಿಧಾನಸಭೆ ಚುನಾವಣೆ ವೇಳೆ ಕೆಜೆಪಿ ಕಟ್ಟಿ ಶಿವಮೊಗ್ಗದಲ್ಲಿ ರುದ್ರೇಗೌಡರನ್ನು ಕಣಕ್ಕಿಳಿಸಿ ನನ್ನ ಸೋಲಿಗೆ ಕಾರಣರಾಗಿದ್ದ ಯಡಿಯೂರಪ್ಪನವರ ವಿರುದ್ಧ ಈಗ ಸೇಡು ತೀರಿಸಿಕೊಳ್ಳಲು ಅವರ ಮಗನನ್ನು ಸೋಲಿಸುತ್ತೇನೆ ಅಂತಾ ಅಬ್ಬರಿಸಿದ್ದಾರೆ.