ಕೊನೆಗೂ ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಗತ್ಯ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಮ್ಮತಿ

ಬೆಂಗಳೂರು: ಸುಮಾರು ಒಂದು ವರ್ಷದ ನಂತರ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಬಿಕ್ಕಟ್ಟು ಬಗೆಹರಿದಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಆದೇಶ ನೀಡಿದ ತಕ್ಷಣ ಕೇಂದ್ರವು ಅಗತ್ಯ ಪ್ರಮಾಣದ ಅಕ್ಕಿಯನ್ನು ನೀಡುತ್ತದೆ ಎಂದು ಖಚಿತಪಡಿಸಿದ್ದಾರೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ಅಕ್ಕಿಯನ್ನು ಪೂರೈಸಲು ಕೇಂದ್ರವು ಒಪ್ಪಿಗೆ ನೀಡಿದೆ. ಕಳೆದ ವಾರ ದೆಹಲಿಯಲ್ಲಿ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಜೋಶಿ ನಡುವೆ ನಡೆದ ಸಭೆಯ ನಂತರ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ಕೇಂದ್ರದಿಂದ ಹೆಚ್ಚುವರಿ 5 ಕೆಜಿ ಸಿಗದ ಕಾರಣ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ನಡೆದಿತ್ತು, ನಂತರದಲ್ಲಿ ಹೆಚ್ಚುವರಿ 5ಕೆಜಿ ಅಕ್ಕಿ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ.

ಇದೀಗ ಕೇಂದ್ರದಿಂದ ಅಕ್ಕಿ ನೀಡಲು ಒಪ್ಪಿಗೆ ದೊರೆತಿದೆ. ಕಳೆದ ವರ್ಷ ದೇಶಾದ್ಯಂತ ಭೀಕರ ಬರಗಾಲದ ಹಿನ್ನೆಲೆಯಲ್ಲಿ ದಾಸ್ತಾನು ಕೊರತೆ ಆತಂಕದಿಂದಾಗಿ ಕೇಂದ್ರವು ಅಕ್ಕಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಮಾಸಿಕ 5 ಕೆಜಿ ಉಚಿತ ಅಕ್ಕಿ ನೀಡುವ ಭರವಸೆ ನೀಡುವ ಅನ್ನ ಭಾಗ್ಯ ಯೋಜನೆಯನ್ನು ಪೂರೈಸಲು ಕರ್ನಾಟಕಕ್ಕೆ 2,36,000 ಟನ್ ಅಕ್ಕಿ ಅಗತ್ಯವಿದೆ.ಕರ್ನಾಟಕದ ಅನ್ನ ಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿ ದಾಸ್ತಾನನ್ನು ನಾವು ಖಚಿತಪಡಿಸಿದ್ದೇವೆ ಮತ್ತು ರಾಜ್ಯ ಸರ್ಕಾರವು ಆದೇಶವನ್ನು ನೀಡಿದರೆ ಅದನ್ನು ಪೂರೈಸಲು ಸಿದ್ಧರಿದ್ದೇವೆ. ಕಾರ್ಯಗತಗೊಳಿಸಲು ಸಾಕಷ್ಟು ಸ್ಟಾಕ್ ಇದೆ ಎಂದು ಜೋಶಿ ತಿಳಿಸಿದ್ದಾರೆ.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement