ಪ್ರಪಂಚದಾದ್ಯಂತ ವಿನಾಶವನ್ನೇ ಉಂಟು ಮಾಡಿದ್ದ ಕೊರೊನಾದ ಭಯ ಇನ್ನೂ ಜನರಲ್ಲಿ ಮನೆ ಮಾಡಿದೆ. ಈಗಲೂ ಅನೇಕ ದೇಶಗಳಲ್ಲಿ ಈ ಸಾಂಕ್ರಾಮಿಕ ರೋಗಕ್ಕೆ ಅನೇಕ ಜನರು ಬಲಿಯಾಗುತ್ತಿದ್ದಾರೆ. ಆದರೆ ಇನ್ನು ಮುಂದೆ ಬರುವ ಸಾಂಕ್ರಾಮಿಕ ಮಹಾ ವಿನಾಶವನ್ನೇ ಉಂಟು ಮಾಡಬಹುದು ಎಂದು ವಿಶ್ವ ಅರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಶ್ವದಾದ್ಯಂತ ಸುಮಾರು ಏಳು ಕೋಟಿ ಜನರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೊಂದು ವೈರಸ್ ಕಾಣಿಸಿಕೊಂಡಿದ್ದು, ಇದು ಕೋವಿಡ್- 19 ಗಿಂತ ಏಳು ಪಟ್ಟು ಹೆಚ್ಚು ಅಪಾಯಕಾರಿ. ಇದನ್ನು ಡಿಸೀಸ್ ಎಕ್ಸ್ ಎಂದು ಹೆಸರಿಸಲಾಗಿದ್ದು, ಇದರಿಂದ ಕನಿಷ್ಠ 5 ಕೋಟಿ ಜನರು ಪ್ರಾಣ ಕಳೆದುಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಡಿಸೀಸ್ ಎಕ್ಸ್ ಸಾಂಕ್ರಾಮಿಕ ರೂಪವನ್ನು ಪಡೆದರೆ ಕನಿಷ್ಠ 5 ಕೋಟಿ ಜನರು ಸಾಯಬಹುದು. ಇದನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಇದು ಕೋವಿಡ್ -19 ಗಿಂತ ಹೆಚ್ಚು ಮಾರಕವಾಗಿದೆ ಎಂದು ಬ್ರಿಟನ್‌ನ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ ಡೇಮ್ ಕೇಟ್ ಬಿಂಗ್‌ಹ್ಯಾಮ್ ಹೇಳಿದ್ದಾರೆ.
1918-19ರಲ್ಲಿ ಸಾಂಕ್ರಾಮಿಕ ರೋಗವಿತ್ತು. ಆ ವೇಳೆಯಲ್ಲಿ ವಿಶ್ವದಾದ್ಯಂತ 5 ಕೋಟಿಗೂ ಹೆಚ್ಚು ಜನರು ಸಾವನ್ನಪ್ಪಿದ್ದರು. ವಿಜ್ಞಾನಿಗಳು ಈಗ ಕಾಣಿಸಿಕೊಂಡಿರುವ ವೈರಸ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಕೇಟ್ ಬಿಂಗ್‌ಹ್ಯಾಮ್ ತಿಳಿಸಿದ್ದಾರೆ.
ಹೆಚ್ಚಿನ ವೈರಸ್ ಗಳು ಭೂಮಿಯಲ್ಲಿ ಪುನರಾವರ್ತನೆ ಮತ್ತು ರೂಪಾಂತರವಾಗುತ್ತಿದ್ದು, ಅವೆಲ್ಲವೂ ಅಪಾಯ ಉಂಟು ಮಾಡುವುದಿಲ್ಲ. ಪ್ರಸ್ತುತ ವಿಜ್ಞಾನಿಗಳು 25 ವೈರಸ್ ಕುಟುಂಬಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಅವುಗಳಲ್ಲಿ ಯಾವುದಾದರೂ ತೀವ್ರ ಸಾಂಕ್ರಾಮಿಕ ರೋಗವಾಗಿ ರೂಪಾಂತರವಾಗಬಹುದು ಎಂದು ಅವರು ತಿಳಿಸಿದ್ದಾರೆ.