ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಉಪತಳಿ ಜೆಎನ್.1 ಪತ್ತೆಯಾಗಿದ್ದರೂ, ಭಯಪಡುವ ಅವಶ್ಯಕತೆ ಇಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸುವುದು ಒಳಿತು. 60 ಸ್ಯಾಂಪಲ್ಸ್ ನಲ್ಲಿ 34 JN.1 ಪ್ರಕರಣಗಳು ಪತ್ತೆಯಾಗಿವೆ. ಟೆಸ್ಟ್ ಹೆಚ್ಚಿಗೆ ಮಾಡಿದಷ್ಟು ಸ್ಪ್ರೆಡಿಂಗ್ ಗೊತ್ತಾಗುತ್ತೆ. ಹೀಗಾಗಿ ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.
ರಾಜ್ಯ ಸಂಪುಟ ಉಪಸಮಿತಿ ಸಭೆ ನಡೆದಿದ್ದು, ಉಪತಳಿ ನಿಯಂತ್ರಣದ ಬಗ್ಗೆ ಮಹತ್ವದ ಚರ್ಚೆಗಳ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರೋಗ್ಯ ಸಚಿವರು, ಮುಂದಿನ ಕ್ರಮಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ, ದೇಶ ಮಟ್ಟದಲ್ಲಿ , ರಾಜ್ಯ ಮಟ್ಟದಲ್ಲಿ ಮಾಹಿತಿ ಕಲೆ ಹಾಕಿದ್ದೇವೆ. ಕೊರೊನಾ ವೈರಸ್ ಉಪ ತಳಿ ಜೆಎನ್.1 ಹೆಚ್ಚಾಗುವ ಸಾಧ್ಯತೆ ಇದೆ ಈ ಮೊದಲೇ ಹೇಳಿದ್ದೆವು. ನಾವು ಕಳುಹಿಸಿದ ಸ್ಯಾಂಪಲ್‌ಗಳ ಪೈಕಿ 34 ಜೆಎನ್.1 ಕೇಸುಗಳು ಪತ್ತೆಯಾಗಿವೆ ಎಂದು ಹೇಳಿದರು.
ರಾಜ್ಯದಲ್ಲಿ ಜೆಎನ್.1 ಉಪತಳಿ ಕಂಡುಬಂದಿರುವುದು ಅಚ್ಚರಿಯೇನಲ್ಲ. ನಾವು ಇದನ್ನು ನಿರೀಕ್ಷೆ ಮಾಡಿದ್ದೆವು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರ ಆತಂಕ ಪಡುವ ಅಗತ್ಯವಿಲ್ಲ ಅಂತ ಹೇಳಿದೆ. ನಾವೆಲ್ಲರೂ ಜಾಗೃತರಾಗಿ ಇರಬೇಕು ಎಂದು ತಿಳಿಸಿದರು. ಹಿಂದಿನ ಕೊರೊನಾ ಅವಧಿಯಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ. 3 ಸಾವಿರಕ್ಕೂ ಹೆಚ್ಚು ಟೆಸ್ಟಿಂಗ್ ಮಾಡಿದ್ದೇವೆ. ಮುಂದೆ 5 ಸಾವಿರ ಟೆಸ್ಟ್ ಮಾಡ್ತೇವೆ ಎಂದರು.
ಕೊರೊನಾ ಹೊಸ ತಳಿಯ ಪತ್ತೆಗಾಗಿ ಜಿನೊಮ್ ಸೀಕ್ವೆನ್ಸಿಂಗ್ ತುಂಬ ಮುಖ್ಯ ಆಗುತ್ತದೆ. ರಾಜ್ಯದಲ್ಲಿ 436 ಕೋವಿಡ್ ಕೇಸ್ ಗಳು ಇವೆ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಬಿಟ್ಟರೆ ಯಾವುದೇ ಆತಂಕವಿಲ್ಲ ಎಂದರು. ಈಗ 400 ಜನ ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ. ಅವರ ಮೇಲೆ ನಿಗಾ ಇಡುತ್ತೇವೆ ಎಂದರು.