ಉಡುಪಿ: ಕೊಲ್ಲೂರು ಮೂಕಾಂಬಿಕೆ ದೇವಿಗೆ ದಕ್ಷಿಣ ಭಾರತ ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರಾಗಿರುವ ಇಳಯರಾಜ ಈ ಹಿಂದೆಯೂ ಮೂಕಾಂಬಿಕೆ ದೇವಿಗೆ ಬಗೆಬಗೆಯ ಆಭರಣ ನೀಡಿ ಭಕ್ತಿ ತೋರಿದ್ದರು. ಈ ಬಾರಿ ದೇವಿಗೆ ವಜ್ರದ ಕಿರೀಟ ಸಹಿತ ಆಭರಣಗಳನ್ನು ಅರ್ಪಿಸಿದ್ದಾರೆ.
ಜೊತೆಗೆ ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಿಸಿದ್ದಾರೆ.ನಿನ್ನೆ ಆಭರಣಗಳನ್ನು ಅರ್ಪಿಸುವ ಮುನ್ನ ದೇಗುಲದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರು ಭಾಗಿಯಾಗಿದ್ದರು. ಕೋಟ್ಯಂತರ ಮೌಲ್ಯದ ಆಭರಣಗಳನ್ನು ಅರ್ಪಿಸಿ ಇಳಯರಾಜ ಅವರು ಭಾವುಕರಾಗಿದ್ದು, ಮೂಕಾಂಬಿಕೆಯಿಂದ ತನ್ನ ಜೀವನದಲ್ಲಿ ಪವಾಡ ನಡೆದಿದೆ ಎಂದಿದ್ದಾರೆ. ಬಳಿಕ ದೇಗುಲದ ವತಿಯಿಂದ ಮಹಾದಾನಿ ಇಳಯರಾಜ ಅವರಿಗೆ ಗೌರವಾರ್ಪಣೆ ಮಾಡಲಾಯಿತು.