ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ. ಇವರಿಗೆನೂ ಲಾಟರಿ ಹೊಡೆದಿಲ್ಲ. ಹೂಡಿಕೆಯಲ್ಲಿ ತೋರಿದ ಜಾಣ್ಮೆಯೇ ಇವರ ಕೈ ಹಿಡಿದಿದೆ.
ನೋಡಲು ತುಂಬಾ ಸಿಂಪಲ್ ಆದರೂ ಇವರೂ ಕೋಟ್ಯಾಧಿಪತಿ. ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ನಾವೂ ಕೋಟ್ಯಾಧೀಶರಾಗಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ.
ಹಳೇ ಕಾಲದ ಮನೆಯಲ್ಲಿ ವಾಸ ಮಾಡುತ್ತಿರುವ ಇವರನ್ನು ನೋಡಿದರೆ ಯಾರೂ ಇವರಲ್ಲಿ ಅಷ್ಟೊಂದು ಹಣ ಇದೆಯಾ ಎಂದು ನಂಬೋದು ಸಾಧ್ಯವಿಲ್ಲ. ಅವರೇನು ಈ ಹಣವನ್ನು ಕೈಲಿ ಹಿಡಿದು ತಿರುಗುವುದಿಲ್ಲ. ಯಾರ ಕೈಗೂ ಸಿಗದಂತೆ ಸುರಕ್ಷಿತವಾಗಿ ಇರಿಸಿದ್ದಾರೆ.
ಸೊಂಟಕ್ಕೆ ಲುಂಗಿ ಸುತ್ತಿಕೊಂಡು, ಹಳೇ ಕಾಲದ ಮನೆ ಮುಂದೆ ನಿಂತು ಪಟಪಟ ಎಂದು ಮಾತನಾಡಿದ ತಾತನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಇಷ್ಟವಾಗಿತ್ತು. ಇವರೇನು ಸಾಮಾನ್ಯವಾದವರಲ್ಲ. ಕಷ್ಟಪಟ್ಟು ದುಡಿಯದೇ ಮನೆಯಲ್ಲಿ ಇದ್ದು ವರ್ಷಕ್ಕೆ 6.15 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಕನ್ನಡ, ಮಲಯಾಳಂ ಭಾಷೆಯಲ್ಲಿ ಮಾತನಾಡುವ ಇವರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಅದರಿಂದಲೇ ಬರೋಬ್ಬರಿ 10 ಕೋಟಿ ರೂಪಾಯಿಗೂ ಅಧಿಕ ಹಣ ಸಂಪಾದಿಸಿದ್ದಾರೆ. ಹೀಗಾಗಿ ಏನೂ ಕೆಲಸ ಇಲ್ಲದೇ ಇದ್ದರೂ ಪ್ರತೀ ವರ್ಷ 6.15 ಲಕ್ಷ ರೂಪಾಯಿ ಇವರ ಬ್ಯಾಂಕ್ ಖಾತೆಗೆ ಬಂದು ಬೀಳುತ್ತಿದೆ.
ಎಲ್ ಆಂಡ್ ಟಿ ಕಂಪೆನಿಯಲ್ಲಿ ಇವರು 27,855 ಷೇರುಗಳನ್ನು ಹೊಂದಿದ್ದಾರೆ. ಈ ಕಂಪೆನಿಯ ಪ್ರತೀ ಷೇರಿಗೆ 2,883 ರೂಪಾಯಿ ಇದೆ. ಈ ಮೌಲ್ಯವನ್ನೇ ಲೆಕ್ಕಾಚಾರ ಮಾಡಿದರೆ ಇವರ ಬಳಿ ಬರೋಬ್ಬರಿ 8.3 ಕೋಟಿ ರೂಪಾಯಿ ಇದೆ. ಜೊತೆಗೆ ಇವರು ಅಲ್ಟ್ರಾ ಟೆಕ್ ಕಂಪೆನಿಯ 2,475 ಷೇರುಗಳನ್ನು ಖರೀದಿ ಮಾಡಿದ್ದಾರೆ. ಅಲ್ಟ್ರಾ ಟೆಕ್ ಕಂಪೆನಿಯ ಪ್ರತೀ ಷೇರಿನ ಬೆಲೆ 8,200 ರೂಪಾಯಿ ಇದೆ. ಇದರ ಪ್ರಕಾರ ಅಲ್ಟ್ರಾ ಟೆಕ್ ಕಂಪೆನಿಯ ಷೇರುಗಳ ಬೆಲೆ 2. 02 ಕೋಟಿ ರೂಪಾಯಿ. ಜೊತೆಗೆ ಕರ್ನಾಟಕ ಬ್ಯಾಂಕ್‌ನ 4 ಸಾವಿರ ಷೇರುಗಳನ್ನು ಹೊಂದಿರುವ ಇವರ ಈ ಷೇರುಗಳ ಒಟ್ಟಾರೆ ಮೌಲ್ಯ 1 ಕೋಟಿ ರೂ. ಈ ಮೂರು ಕಂಪೆನಿಯ ಷೇರುಗಳ ಒಟ್ಟಾರೆ ಮೌಲ್ಯ 10 ಕೋಟಿ ರೂಪಾಯಿಗೂ ಹೆಚ್ಚಿದೆ. ಹೀಗಾಗಿ ಇವರೀಗ ನಿಜವಾದ ಕೋಟ್ಯಾಧೀಶ್ವರರು.