ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿರುವ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಟಿ.ಎಸ್. ಶ್ರೀವತ್ಸವ ವಿರುದ್ಧ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರತಾಪ್ ಸಿಂಹ, “ಮಹಿಷ ದಸರಾ ಆಚರಣೆ ಮಾಡಲು ಬಿಡುವುದಿಲ್ಲ. ಒಂದು ವೇಳೆ ಮಹಿಷ ದಸರಾ ನಡೆಸಲು ಮುಂದಾದರೆ ಸಂಘರ್ಷ ನಡೆಸಲು ಸಿದ್ದರಿರಬೆಕು” ಎಂದು ಬೆದರಿಕೆ ಮಾತುಗಳನ್ನಾಡಿದ್ದರು.
”ಮಹಿಷ ದಸರಾ ಆಚರಣೆಯನ್ನು ತಡೆಯಲು ಈಗಾಗಲೇ ರೂಪುರೇಷೆ ತಯಾರು ಮಾಡಿರುತ್ತೇವೆ. ಯಾವ ರೀತಿಯಲ್ಲಿ ಮಹಿಷ ದಸರಾ ಮಾಡುತ್ತಾರೊ ನೋಡೋಣ” ಎಂದು ಕೃಷ್ಣ ರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಅವರೂ ಹೇಳಿದ್ದಾರೆ.
ಅವರಿಬ್ಬರ ಹೇಳಿಕೆಯು ಪ್ರಚೋದನಾಕಾರಿಯಾಗಿವೆ ಮತ್ತು ಒಂದು ಸಮುದಾಯದ ವಿರುದ್ಧ ದ್ವೇಷ ಬಿತ್ತುವಂತಿವೆ ಎಂದು ಸಂಘಟನೆ ಆರೋಪಿಸಿದ್ದು, ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.