ವಿಶ್ವದಾದ್ಯಂತ ಕ್ಯಾನ್ಸರ್ ಕೊನೆಗೊಳಿಸಲು ಕ್ವಾಡ್ ಕ್ಯಾನ್ಸರ್ ಮೂನ್‌ಶಾಟ್ ಉಪಕ್ರಮವನ್ನು ಅನಾವರಣಗೊಳಿಸಲು ನಾನು ಹೆಮ್ಮೆಪಟ್ಟುಕೊಳ್ಳುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಇಂಡೋ-ಫೆಸಿಪಿಕ್ ಪ್ರದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಕ್ವಾಡ್ ರಾಷ್ಟ್ರಗಳ ನಾಯಕರು ಬದ್ಧತೆ ಪ್ರದರ್ಶಿಸಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಇಂಡೋ –ಫೆಸಿಫಿಕ್ ನಲ್ಲಿ 1.5 ಲಕ್ಷ ಮಹಿಳೆಯರು ಇದರಿಂದಾಗಿ ಸಾವಿಗೀಡಾಗುತ್ತಿದ್ದಾರೆ. ಇದನ್ನು ಮುಂದುವರಿಯಲು ನಾವು ಬಿಡುವುದಿಲ್ಲ, ಎಂದು ಬೈಡನ್ ಎಕ್ಸ್ ನಲ್ಲಿ ತಿಳಿಸಿದ್ದಾರೆ.
‘ಅಮೆರಿಕ, ಭಾರತ, ಆಸ್ಟ್ರೇಲಿಯಾ, ಜಪಾನ್ ನಾವೆಲ್ಲರೂ ಸೇರಿ ಪ್ರತಿಯೊಬ್ಬ ಕ್ಯಾನ್ಸರ್ ರೋಗಿಯ ಹೋರಾಟ ಹಾಗೂ ಆರೈಕೆಗೆ ನೆರವಾಗಲಿದ್ದೇವೆ. ಕ್ಯಾನ್ಸರ್ ಅನ್ನು ಸೋಲಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ. ಬೈಡನ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಭಾರತ ಪ್ರಧಾನಿ ನರೇಂದ್ರ ಮೋದಿ, ‘ಕ್ಯಾನ್ಸರ್ ವಿರುದ್ಧದ ಉಪಕ್ರಮವನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡೋಣ’ ಎಂದು ಹೇಳಿದ್ದಾರೆ.