ನವದೆಹಲಿ: ಖನಿಜ ಸಂಪತ್ತುಗಳ ಇಪ್ಪತ್ತು ಬ್ಲಾಕ್‌ಗಳ ಮೊದಲ ಹಂತದ ಹರಾಜು ಪ್ರಕ್ರಿಯೆಗೆ ನ. 29 ರಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು.
ಈ ಉಪಕ್ರಮದಿಂದ ನಮ್ಮ ದೇಶದ ಆರ್ಥಿಕತೆಯನ್ನು ವೃದ್ಧಿಸುವ, ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುವ ಮತ್ತು ಶುದ್ಧ ಇಂಧನ ಭವಿಷ್ಯಕ್ಕೆ ಪರಿವರ್ತನೆಯನ್ನು ಬೆಂಬಲಿಸುವ ಉದ್ದೇಶದಿಂದ ಈ ಹರಾಜನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಭಾರತವು 2030 ರ ವೇಳೆಗೆ ಪಳೆಯುಳಿಕೆ ರಹಿತ ಮೂಲಗಳಿಂದ ಶೇ 50 ಸಂಚಿತ ವಿದ್ಯುಚ್ಛಕ್ತಿ ಸಾಮರ್ಥ್ಯವನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಶಕ್ತಿ ಪರಿವರ್ತನೆಯ ಇಂತಹ ಮಹತ್ವಾಕಾಂಕ್ಷೆಯ ಯೋಜನೆಯು ಎಲೆಕ್ಟ್ರಿಕ್ ವಾಹನಗಳು, ಗಾಳಿ ಮತ್ತು ಸೌರ ಶಕ್ತಿ ಯೋಜನೆಗಳು ಮತ್ತು ಬ್ಯಾಟರಿ ಶೇಖರಣಾ ವ್ಯವಸ್ಥೆಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಈ ಹರಾಜಿನಿಂದ ಬರುವ ಆದಾಯವು ರಾಜ್ಯ ಸರ್ಕಾರಗಳಿಗೆ ಸೇರುತ್ತದೆ. ಈ ಸಂದರ್ಭ ಹರಾಜಿನಲ್ಲಿ ಹೆಚ್ಚು ಭಾಗವಹಿಸುವಿಕೆಯನ್ನು ಉತ್ತೇಜಿಸಲು ನಿರ್ಣಾಯಕ ಖನಿಜಗಳ ದರಗಳನ್ನು ತರ್ಕ ಬದ್ಧಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.