ಸುಲ್ತಾನ್ ಪುರ್: ಖ್ಯಾತ ಗಾಯಕಿ ಹಾಗೂ ನಟಿ ಮಲ್ಲಿಕಾ ರಜಪೂತ್ (ವಿಜಯಲಕ್ಷ್ಮಿ) ಅವರು ತಮ್ಮ ನಿವಾಸದಲ್ಲಿ ಫೆಬ್ರವರಿ 13 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಸಾಕಷ್ಟು ಸಿನಿಮಾಗಳಲ್ಲಿ ಹಾಡಿದ್ದ ಮಲ್ಲಿಕಾ ರಜಪೂತ್ ಅವರಿಗೆ 35 ವರ್ಷ ವಯಸ್ಸಾಗಿತ್ತು. ಸುಲ್ತಾನ್ ಪುರದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಕುಂಡ್ ಪ್ರದೇಶದಲ್ಲಿರುವ ತಮ್ಮ ಸ್ವಗೃಹದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾ ಅವರ ಮೃತದೇಹ ಪತ್ತೆಯಾಗಿದೆ.
ಇನ್ನು ಮಲ್ಲಿಕಾ ಅವರದ್ದು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡರೂ, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಜ ಕಾರಣ ತಿಳಿದು ಬರಲಿದೆ. ಅವರ ಸಾವು ಅನುಮಾನಾಸ್ಪದವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಮಗಳ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾ ಅವರ ತಾಯಿ, ’ಮಗಳು ಆರಾಮವಾಗಿಯೇ ಇದ್ದಳು, ಇಂದು ಬೆಳಗ್ಗೆ ಎದ್ದಾಗ ಅವಳ ಕೋಣೆಯ ಬಾಗಿಲು ಹಾಕಿತ್ತು. ಕೋಣೆಯ ಲೈಟ್ ಆನ್ ಇತ್ತು. ಬಾಗಿಲು ತಟ್ಟಿದಾಗ ಆಗೆ ತೆಗೆಯಲಿಲ್ಲ. ಬಳಿಕ ನಾನು ಕಿಟಕಿಯಿಂದ ನೋಡಿದಾಗ ಆಕೆ ನಿಂತಿರುವಂತೆ ಕಾಣಿಸಿತು. ನಂತರ ಆಕೆಯ ತಂದೆ ಹಾಗೂ ಮತ್ತಿತರರನ್ನು ಕರೆಸಿ ಬಾಗಿಲು ಒಡೆಸಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮನೆಯ ಸದಸ್ಯರೆಲ್ಲರೂ ಮಲಗಿದ್ದ ಕಾರಣ ಈ ಘಟನೆ ಯಾವಾಗ ನಡೆದಿದೆ ಎಂದು ಗೊತ್ತಾಗಲಿಲ್ಲ’ ಎಂದರು.