ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಅವರನ್ನು ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಅವರು ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಚಿತ್ರರಂಗದ ಅನೇಕ ನಟ, ನಟಿಯರು ಹಾಗೂ ಗಣ್ಯರು ಆಗಮಿಸಿದರು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಅವರು ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಲೀಲಾವತಿ ನಿಧನಕ್ಕೆ ಸಿಎಂ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ. ಇಂದು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ.
ಈ ವೇಳೆ, ವಿನೋದ್ ರಾಜ್ ಅವರನ್ನ ಭೇಟಿಯಾಗಿ ಸಿದ್ದರಾಮಯ್ಯ ಅವರು ಸಂತೈಸಿ ಧೈರ್ಯ ತುಂಬಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಲೀಲಾವತಿ ಅವರ ಅಂತಿಮ ದರ್ಶನದ ಬಳಿಕ ವಿನೋದ್ ರಾಜ್‌ಗೆ ಸಾಂತ್ವನ ಹೇಳಿದ್ದಾರೆ.
ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಕಲಾವಿದರು, ಆಪ್ತರು, ಅಭಿಮಾನಿಗಳು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿ ಅವರ ಅಂತ್ಯ ಸಂಸ್ಕಾರ ಮಧ್ಯಾಹ್ನ 3:30ಕ್ಕೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.