ಕಾರವಾರ: ಗಂಡನೊಂದಿಗೆ ಜಗಳವಾಡಿಕೊಂಡ ಪತ್ನಿ ಸಿಟ್ಟಿನಿಂದ ತಾನು ಹೆತ್ತ ಮಗುವನ್ನು ರಾತ್ರೊ ರಾತ್ರಿ ಮೊಸಳೆಗಳಿದ್ದ ನಾಲೆಗೆ ಎಸೆದಿರುವ ಘಟನೆ ಉತ್ತರ ಕನ್ನಡದ ದಾಂಡೇಲಿಯ ಹಾಲಮಡ್ಡಿಯಲ್ಲಿ ನಡೆದಿದೆ.
ಸಾವಿತ್ರಿ ಎಂಬ ಮಹಿಳೆ ಈ ಕೃತ್ಯ ಎಸಗಿದ್ದಾರೆ. ಸಾವಿತ್ರಿ ಹಾಗೂ ಆಕೆಯ ಗಂಡ ರವಿಕುಮಾರ್ ನಡುವೆ ಶನಿವಾರ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಸಾವಿತ್ರಿ, ಕೋಪದಲ್ಲಿ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದು ಬಳಿಕ ಪಶ್ಚಾತಾಪದಿಂದಾಗಿ ತಾನು ಎಸಗಿರುವ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಮೊಸಳೆಯ ದಾಳಿಗೆ ವಿನೋದ್(6) ಮೃತಪಟ್ಟಿದ್ದಾನೆ. ಮುಳುಗು ತಜ್ಞರು ಶೋಧ ಕಾರ್ಯ ನಡೆಸಿ ಮಗುವಿನ ಮೃತದೇಹವನ್ನು ಮೊಸಳೆಗಳಿದ್ದ ನಾಲೆಯಿಂದ ಹೊರತೆಗೆದಿದ್ದಾರೆ. ಇನ್ನು ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.