ಗಣೇಶ ಚತುರ್ಥಿ ಬಂತು ಅಂದ್ರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ದೇಶವೇ ವೈಭವದಿಂದ ಆಚರಿಸುವ ಒಂದು ಹಬ್ಬವೆಂದರೆ ಗಣೇಶನ ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬ ಆಚರಿಸಲಾಗುತ್ತದೆ.
ಮೊದಲು ಗೌರಿ ಪೂಜೆ ನಡೆಯುತ್ತದೆ. ನಂತರ ಗಣಪತಿಯನ್ನು ಪೂಜಿಸಲಾಗುತ್ತದೆ. ಜನರು ಬೀದಿ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸುತ್ತಾರೆ. ಹಲವು ಸಿಹಿತಿಂಡಿಗಳನ್ನು ಮನೆಯಲ್ಲೇ ತಯಾರಿಸಿ, ವಿಘ್ನ ವಿನಾಯಕನಿಗೆ ನೈವೇದ್ಯವಾಗಿ ಸಲ್ಲಿಸಿ ಖುಷಿ ಪಡುತ್ತಾರೆ. ಗಣೇಶನ ಹಬ್ಬ ಅಂದ್ರೆ ಅಲ್ಲಿ ಮೋದಕ ಇರ್ಲೇಬೇಕು. ಮೋದಕ ಗಣೇಶನಿಗೆ ಅತ್ಯಂತ ಪ್ರಿಯವಾದುದಾಗಿದೆ. ಆದ್ದರಿಂದ ಗಣೇಶ ಚತುರ್ಥಿಯಂದು ಇದನ್ನು ಎಲ್ಲರ ಮನೆಯಲ್ಲಿಯೂ ತಯಾರು ಮಾಡುತ್ತಾರೆ.
ಸಾಮಾನ್ಯವಾಗಿ ಗಣೇಶ ಚತುರ್ಥಿಯಂದು ಗಣೇಶನಿಗೆ ಚಕ್ಕುಲಿ, ಉಂಡೆ, ಎಳ್ಳುಂಡೆ, ಕರ್ಜಿಕಾಯಿ, ಕಡುಬು, ಸಿಹಿ ಕಡುಬು, ಖಾರ ಕಡುಬು ಈ ರೀತಿ ಅನೇಕ ತಿಂಡಿಗಳನ್ನು ಮಾಡಿ ನೈವೇದ್ಯಗೆ ಇಡಲಾಗುತ್ತದೆ. ಆದರೆ ಇದೆಲ್ಲದಕ್ಕಿಂತಲೂ ಮೋದಕ ತುಂಬಾ ಸ್ಪೆಷಲ್. ಯಾಕೆಂದರೆ ಗಣಪ ಮೋದಕ ಪ್ರಿಯ. ಹೀಗಾಗಿಯೇ ಈತನನ್ನು ಮೋದಕ ಪ್ರಿಯ ಎಂದು ಸಹ ಕರೆಯುತ್ತಾರೆ. ಹಾಗಿದ್ರೆ ಮೋದಕವನ್ನು ಮನೆಯಲ್ಲೇ ಸಿಂಪಲ್ ಆಗಿ ತಯಾರಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು
ಕೊಬ್ಬರಿ, ಬೆಲ್ಲ, ಅಕ್ಕಿ ಹಿಟ್ಟು, ತುಪ್ಪ, ಏಲಕ್ಕಿ, ಗೋಡಂಬಿ, ಉಪ್ಪು.
ಮೋದಕ ಮಾಡುವ ವಿಧಾನ:
ಮೊದಲು ಒಂದು ಪಾತ್ರೆಗೆ ನೀರು ಹಾಕಿ ಅದು ಕಾದ ಮೇಲೆ, ಉಪ್ಪು, ಅಕ್ಕಿ ಹಿಟ್ಟು ಹಾಕಿ ಬೇಯಿಸಿ. ಬಳಿ ಇನ್ನೊಂದು ಪಾತ್ರೆಗೆ ಬೆಲ್ಲ ಹಾಕಿ ಅದು ಕರಗಿದ ಮೇಲೆ, ಕೊಬ್ಬರಿ, ಏಲಕ್ಕಿ ಪುಡಿ, ಗೋಡಂಬಿ ಹಾಕಿ ಹೂರ್ಣ ಮಾಡಿಕೊಳ್ಳಿ. ನಂತರ ಬೇಯಿಸಿದ ಅಕ್ಕಿ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ನಂತರ ಮೋದಕದ ಆಕಾರಕ್ಕೆ ಮಾಡಿ ಮಧ್ಯದಲ್ಲಿ ತಯಾರಿಸಿದ ಹೂರ್ಣ ಹಾಕಿ. ಬಳಿಕ ಅರ್ಧ ಪಾತ್ರೆಗೆ ನೀರು ಹಾಕಿ ಅದರ ಮೇಲೆ ಒಂದು ಪ್ಲೇಟ್ ಇಟ್ಟು ಮೋದಕವನ್ನು 15 ನಿಮಿಷ ಬೇಯಲು ಬಿಡಿ.. ಮೋದಕ ರೆಡಿ..!