ಸುಳ್ಯ: ಕೋಟ್ಯಂತರ ಹಿಂದೂಗಳ ಪವಿತ್ರ ಹಬ್ಬ ಶ್ರೀ ಗಣೇಶೋತ್ಸವ. ಧಾರ್ಮಿಕ ನಂಬಿಕೆಯ ತಳಹದಿಯ ಮೇಲೆ ಈ ಹಬ್ಬವನ್ನು ದೇಶದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಆದರೆ ಕೆಲವರು ಈ ಹಬ್ಬಕ್ಕೆ ಕಳಂಕ ತರುವ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಟು ಪದಗಳಿಂದ ಟೀಕಿಸಿದೆ.
ಸುಳ್ಯದ ಜಯನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಎಂಬ ತಲೆಬರಹದಡಿಯಲ್ಲಿ ಲಾಟರಿ ಟಿಕೆಟ್ ಫೋಟೋವೊಂದು ಎಲ್ಲ ಕಡೆ ವೈರಲ್ ಆಗುತ್ತಿದೆ. ಇದರ ಪ್ರಥಮ ಬಹುಮಾನ ಬ್ಲಾಕ್ ಅಂಡ್ ವೈಟ್ ಬ್ಲೆಂಡೆಡ್ ಸ್ಕಾಚ್ ವಿಸ್ಕಿ ಹಾಗೂ ದ್ವಿತೀಯ ಬಹುಮಾನ ಒಂದು ಕೇಸ್ ಯು ಬಿ ಬಿಯರ್ ಎಂದು ಬರೆಯಲಾಗಿದೆ. ಟಿಕೆಟ್ ದರ 100 ರೂ. ಎಂದು ಪ್ರಿಂಟ್ ಆಗಿದೆ. ಇಂತಹ ಲಾಟರಿ ಟಿಕೆಟ್ ಅನ್ನು ಸಂಘಟಿಸುವವರ ವಿರುದ್ಧ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ತಾಲೂಕು ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, “ಈ ರೀತಿ ಹಿಂದೂ ಧರ್ಮದ ಹಬ್ಬಗಳ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಪೋಲಿಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂತಹ ಕೀಳು ಮಟ್ಟದ ಮನಸ್ಥಿತಿಯ ವ್ಯಕ್ತಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುವ ಜನರನ್ನು ಮಟ್ಟ ಹಾಕುವ ಕೆಲಸ ಆಗಬೇಕಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.