ಗದಗ: ಮುದ್ರಣ ಕಾಶಿ ಗದಗದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ ಹಾಗೂ CRPF ಯೋಧ ಸಂತೋಷಕುಮಾರ ಹೆಸರಿನಲ್ಲಿ ಆನ್ಲೈನ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ! ಗದಗದ ರಮೇಶ ಹತ್ತಿಕಾಳ ಅನ್ನೋರಿಗೆ 55 ಸಾವಿರ ರೂಪಾಯಿ ವಂಚಿಸಿ ಪಂಗನಾಮ ಹಾಕಿದ್ದಾರೆ. ರವಿ ಚೆನ್ನಣ್ಣವರ ಹೆಸರಿನ ಫೇಸ್ಬುಕ್ ಫೇಕ್ ಐಡಿಯಿಂದ ರಮೇಶರಿಗೆ ಮೆಸೇಜ್ ಬಂದಿದೆ.
ನನ್ನ ಸ್ನೇಹಿತ CRPF ಯೋಧನಿಗೆ ಟ್ರಾನ್ಸಫರ್ ಆಗಿದೆ. ಆತನ ಬಳಿ ಇರೋ ದುಬಾರಿ ಫರ್ನಿಚರ್ ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ದು, ನೀವು ವ್ಯವಹಾರ ಮುಗಿಸಿಕೊಳ್ಳಿ ಅಂತ ಮೆಸೇಜ್ ಬಂದಿದೆ. ಮೊದ ಮೊದಲು ರವಿ ಹಾಗೂ ಸಂತೋಷಕುಮಾರ ಅವರ ಜೊತೆಗಿನ ಫೇಸ್ಬುಕ್ ಮಾತುಕತೆ, ನಂತರ ವಾಟ್ಸಪ್ ಚಾಟಿಂಗ್ ಮೂಲಕ ಮುಂದುವರೆದಿದೆ. ಹಿರಿಯ ಅಧಿಕಾರಿಯೊಬ್ರು ಹೇಳಿದ್ದಾರೆ ಅಂದ ಮೇಲೆ, ನನಗಲ್ದೆ ಇದ್ರೂ, ಯಾರಾದ್ರೂ ಸ್ನೇಹಿತರಿಗಾದ್ರೂ ಫರ್ನಿಚರ್ ಕೊಡಿಸೋಣ ಅಂತ, 80 ಸಾವಿರ ರೂಪಾಯಿಗೆ ಫರ್ನಿಚರ್ ರೇಟ್ ಫಿಕ್ಸ್ ಮಾಡಿದ್ದಾರೆ. ಮೊದಲಿಗೆ 55 ಸಾವಿರ ಹಣವನ್ನ ಫೇಕ್ CRPF ಯೋಧನ ಅಕೌಂಟ್ ಗೆ ಹಾಕಿದ್ದಾರೆ. ಟಿವಿ, ಕಾಟ್, ವಾಷಿಂಗ್ ಮಷಿನ್, ಅಲ್ಮೇರಾ, ಎಸಿ, ಸೈಕಲ್, ಸೋಫಾ ಸೆಟ್ ಇವೆಲ್ಲವುಗಳ ಫೋಟೋ ಕಳಿಸಿ, ರಮೇಶರಿಗೆ ನಂಬಿಕೆ ಬರುವಂತೆ ಮಾಡಲಾಗಿದೆ. ಇನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧವೂ ರಮೇಶ ಗಂಭೀರ ಆರೋಪ ಮಾಡ್ತಿದ್ದಾರೆ. ನನಗೆ ಮೋಸವಾದ ಬಗ್ಗೆ ದೂರು ಕೊಡಲು ಹೋದರೆ, ಬೇಗನೆ ತೆಗೆದುಕೊಳ್ಳಲಿಲ್ಲ. ಠಾಣೆಗೆ ಹೋದರೆ ಇಂಟರ್ನೆಟ್ ಇಲ್ಲ ಎಂದು ಬಹಳ ದಿನ ಸತಾಯಿಸಿದ್ರು. ಜೊತೆಗೆ ಈ ರೀತಿ ಘಟನೆಗಳು ಬಹಳ ಆಗಿವೆ. ಹೀಗಾಗಿ ದುಡ್ಡು, ಮರಳಿ ಸಿಗೋದು ಗ್ಯಾರಂಟಿ ಇಲ್ಲ ಅಂತ ಸ್ವತಃ, ತನಿಖೆಗೆ ಮೊದಲೇ ಪೊಲೀಸರು, ಹಣ ಕಳೆದುಕೊಂಡ ವ್ಯಕ್ತಿಗೆ ಹೇಳ್ತಾರಂತೆ. ಹಾಗಾದ್ರೆ ಸೈಬರ್ ಕ್ರೈಂ ಪೊಲೀಸ್ ಠಾಣೆ ಇರೋದಾದ್ರೂ ಯಾಕೆ ಅಂತಾ, ಹಣ ಕಳೆದುಕೊಂಡ ವ್ಯಕ್ತಿ ಪ್ರಶ್ನಿಸ್ತಿದ್ದಾರೆ. ಇನ್ನು ಈ ರೀತಿ ಆನ್ಲೈನ್ ವಂಚನೆ ಪ್ರಕರಣಗಳು ಜಿಲ್ಲೆಯಲ್ಲಿ ಮಿತಿಮೀರಿವೆ. ಆದರೆ, ಇವುಗಳಲ್ಲಿ ಇತ್ಯರ್ಥ ಆಗಿ, ಪರಿಹಾರ ಆಗಿದ್ದು ಬೆರಳಣಿಕೆಯಷ್ಟು ಮಾತ್ರ. ಪೊಲೀಸ್ ಇಲಾಖೆ ಈ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಆದರೆ, ಇನ್ನೂ ಜನ ಎಚ್ಚೆತ್ತುಕೊಳ್ತಿಲ್ಲ. ಹೀಗಾಗಿ, ಮೋಸ ಹೋಗೋರು ಇರೋವರೆಗೂ, ಮೋಸ ಮಾಡೋರು ತಮ್ಮ ಆಟ ನಿಲ್ಲಿಸಲ್ಲ ಅನ್ನೋದು ಪಕ್ಕಾ ಆಗಿದೆ. ಆದರೆ, ಖಾಕಿ ಮಾತ್ರ ಈ ಜಾಲಕ್ಕೆ ಫುಲ್ ಸ್ಟಾಪ್ ಇಡಲೇಬೇಕಾದ ಅನಿವಾರ್ಯತೆಯೂ ಇದೆ.