ಅಯೋಧ್ಯೆ: ರಾಮ ಮಂದಿರದಲ್ಲಿ ಇಂದು ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಮಂದಿರ ನಿರ್ಮಾಣ ಸಮಿತಿಯ ಸದಸ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ಸುಮಾರು 150-200 ಕೆಜಿ ತೂಕದ ಈ ವಿಗ್ರಹವನ್ನು ಬುಧವಾರ ಸಂಜೆ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. ರಾತ್ರಿ ವಿಶೇಷ ಪೂಜೆಯೊಂದಿಗೆ ರಾಮಲಲ್ಲಾನ ವಿಗ್ರಹವನ್ನು ಗರ್ಭಗುಡಿಗೆ ತರಲಾಯಿತು.
ಇನ್ನು ಈ ಬೆಳ್ಳಿಯ ವಿಗ್ರಹವನ್ನು ಗುಲಾಬಿ ಮತ್ತು ಚೆಂಡು ಹೂಗಳಿಂದ ಅಲಂಕರಿಸಲಾಗಿದ್ದು, ಬಳಿಕ ಅದನ್ನು ಗರ್ಭಗುಡಿಯಲ್ಲಿ ಇರಿಸಲು ಕ್ರೇನ್ ಬಳಸಿ ಮೇಲೆತ್ತಲಾಯಿತು.
ಜನವರಿ 22 ರ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಚರಣೆಯ ಅಂಗವಾಗಿ ಕಲಶ ಪೂಜೆ ಇಂದು ನಡೆದಿದೆ.