ಬೆಂಗಳೂರು: ಗಾಂಧೀಜಿಯವರಂತೆ ಅತ್ಯಂತ ಸರಳ ಜೀವನ ನಡೆಸಿದವರು ಬೇರೆ ಯಾರೂ ಸಿಗಲಿಕ್ಕಿಲ್ಲ. ಸತ್ಯದ ಮಾರ್ಗದಲ್ಲಿ ಅಹಿಂಸೆ ಬೋಧಿಸಿದ ಮಹಾತ್ಮ ಗಾಂಧೀಜಿ ಜಗತ್ತಿಗೊಬ್ಬರೇ! ಹೀಗಂತ ಸಿಎಂ ಸಿದ್ದರಾಮಯ್ಯ ಹೇಳಿದರು. ಗಾಂಧೀಜಿಯವರ 154ನೇ ಜಯಂತಿ ನಿಮಿತ್ತ ಸೋಮವಾರ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗಾಂಧೀ ಕ್ಲಾಸ್” ಬಗ್ಗೆ ಪಾಠ ಮಾಡಿದರು. ಗಾಂಧೀ ಕ್ಲಾಸ್ ಅಂದ್ರೆ ಮೂರನೇ ದರ್ಜೆ ಅಂತಾ ಹೇಳೋದು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಆಗ ರೈಲಿನಲ್ಲಿ ಸದಾ ಮೂರನೇ ದರ್ಜೆಯ ಟಿಕೆಟ್ ತೆಗೆದುಂಕೊಂಡೇ ಪ್ರಯಾಣಿಸುತ್ತಿದ್ದರು. ಇದಕ್ಕೆ ಕಾರಣ ಅವರ ಬಳಿ ಹಣ ಇರುತ್ತಿಲ್ಲವೆಂದಲ್ಲ. ಬದಲಾಗಿ ದುಂದು ವೆಚ್ಚ ಬೇಡ ಎಂಬುದಾಗಿತ್ತು. ಅನಗತ್ಯ ಖರ್ಚು-ವೆಚ್ಚಗಳಿಂದ ಅಗತ್ಯ ಖರ್ಚುಗಳಿಗೆ ತೊಂದರೆ ಮಾಡಿಕೊಳ್ಳುವುದೇಕೆ? ಆದಷ್ಟು ಸರಳ ಜೀವನವೇ ಸುಲಭ ಜೀವನ ಎಂಬ ನಿಲುವು ಗಾಂಧೀಜಿಯವರದಾಗಿತ್ತು. ಆದರೆ, ಒಂದು ದಿನ ಗಾಂಧೀಜಿಯವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದಿನವೂ ಗಾಂಧಿಯವರನ್ನು ಗಮನಿಸಿದ್ದ ಸಹ ಪ್ರಯಾಣಿಕನೊಬ್ಬ ಗಾಂಧೀಜಿಯವರತ್ತ ದೃಷ್ಟಿ ಹರಿಸಿ “ನೀವು ಯಾವಾಗಲೂ ಮೂರನೇ ದರ್ಜೆ ಪ್ರಯಾಣವನ್ನೇ ಮಾಡುತ್ತೀರಲ್ಲ, ಯಾಕೆ? ಎಂದು ಪ್ರಶ್ನಿಸುತ್ತಾನೆ. ಆಗ ಗಾಂಧೀಜಿಯವರು ಕೊಟ್ಟ ಉತ್ತರ ಹೀಗಿತ್ತು- ” ಏನ್ಮಾಡೋದು ಇದಕ್ಕೂ ಕಡಿಮೆ ಟಿಕೆಟ್ ದರದ ನಾಲ್ಕನೇ ದರ್ಜೆ ಇಲ್ಲವಲ್ಲ?” ಎಂದು. ಸಿಎಂ ಸಿದ್ದರಾಮಯ್ಯ ಅವರು ಹೇಳಿದ ಗಾಂಧಿಯವರ ಸಿಂಪಲ್ ಲಿವಿಂಗ್ ನ ಈ ಕತೆಯನ್ನು ಕೇಳಿದ ಪ್ರತಿಯೊಬ್ಬರೂ ಚೆಪ್ಪಾಳೆ ಹಾಕಿದರು!