ದಾವಣಗೆರೆ :ಪರಿಸರ ದಿನಾಚರಣೆ ದಿನ ಗಿಡ ನೆಡುವುದು ಮುಖ್ಯವಲ್ಲ, ಜೊತೆಗೆ ಗಿಡಗಳನ್ನು ಪೆÇೀಷಣೆ ಮಾಡುವುದು ಮುಖ್ಯ ಈ ನಿಟ್ಟಿನಲ್ಲಿ ನಾಗರಿಕರು ಗಿಡ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ.ಎನ್.ಹೆಗಡೆ ಹೇಳಿದರು.
ಬುಧವಾರ ನಗರದ ಹದಡಿ ರಸ್ತೆಯಲ್ಲಿರುವ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಗಿಡ ಬೆಳೆಸಿ, ಉಳಿಸುವ ಮೂಲಕ ಆರೋಗ್ಯ ಕಾಪಾಡುವ ಕೆಲಸ ಮಾಡಬೇಕು. ಮನುಷ್ಯರು ಆಮ್ಲಜನಕ ತೆಗೆದುಕೊಂಡು ಇಂಗಾಲದ ಡೈ ಆಕ್ಸೈಡ್ ಬಿಡುತ್ತಾರೆ. ಆದರೆ ಸಸಿಗಳು ಇಂಗಾಲದ ಡೈ ಆಕ್ಸೈಡ್ ತೆಗೆದುಕೊಂಡು ಆಮ್ಲಜನಕ ನೀಡುತ್ತದೆ. ನಾವೆಲ್ಲರೂ ಜೀವಿಸಲು ಹಾಗೂ ಉಸಿರಾಡಲು ಪರಿಸರ ಮುಖ್ಯ, ಪರಿಸರ ಇದ್ದಷ್ಟು ಆರೋಗ್ಯ ಹೆಚ್ಚಾಗುತ್ತದೆ. ಒಂದು ವೇಳೆ ಪರಿಸರ ಕ್ಷೀಣಿಸಿದರೆ ಭೂಮಿ ಮೇಲಿನ ಜೀವಿಗಳು ನಾಶ ಹೊಂದುತ್ತವೆ. ಜೊತೆಗೆ ಉಸಿರಾಟದ ತೊಂದರೆ ಉಂಟಾಗುತ್ತದೆ ಎಂದರು.
ವಾಹನಗಳ ಹೊಗೆಯಿಂದ ಹಾಗೂ ಬೇರೆ ಬೇರೆ ಮಾಲಿನ್ಯದಿಂದ ಇಂದು ಪರಿಸರದ ವಾತಾವರಣ ಹದಗೆಡುತ್ತಿದೆ. ವಾಹನಗಳ ಓಡಾಟದಿಂದ ಪರಿಸರದ ವಾತಾವರಣದಲ್ಲಿ ವ್ಯತ್ಯಾಸವಾಗುವುದು ಇದರಿಂದ ಕಂಡುಬಂದಿದೆ ಎಂದರು.
ಹಿರಿಯ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ಮಾತನಾಡಿ, ಪರಿಸರದ ಉಳಿವಿಗೆ ಗಿಡಗಳನ್ನು ಸಂರಕ್ಷಣೆ ಮಾಡುವುದು ಮುಖ್ಯವಾಗಿದೆ. ಪ್ರತಿಯೊಬ್ಬರು ಒಂದೊಂದು ಗಿಡವನ್ನು ನೆಡಬೇಕು. ವಾರಕ್ಕೆ ಒಂದು ಬಾರಿಯಾದರೂ ನೆಟ್ಟಿರುವಂತಹ ಗಿಡಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಪರಿಸರ ನಿರ್ಮಾಣದ ಜವಾಬ್ದಾರಿ ನಮ್ಮ ಮೇಲೆ ಅವಲಂಭಿತವಾಗಿದೆ. ಆ ಮೂಲಕ ಒಳ್ಳೆಯ ಪರಿಸರ ನಿರ್ಮಾಣದಿಂದಾಗಿ ಜಿಲ್ಲೆ ಉತ್ತಮ ನಗರ ಎನಿಸಿಕೊಳ್ಳಬೇಕು. ನಾವು ಪರಿಸರ ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ. ಮಲೆನಾಡಿನ ಭಾಗಗಳಲ್ಲಿ ಗಿಡ ಮರಗಳನ್ನು ಕಡಿಯುತ್ತಿರುವುದರಿಂದ ಮೊದಲಿನಂತೆ ಮಳೆಯಾಗುತ್ತಿಲ್ಲ. ಆ ರೀತಿಯಾಗಬಾರದು. ನಾವೆಲ್ಲರೂ ಅತೀ ಹೆಚ್ಚು ಗಿಡ ಮರ ಬೆಳೆಸುವ ಮೂಲಕ ಜಿಲ್ಲೆಯನ್ನು ಮಲೆನಾಡು ಪ್ರದೇಶವಾಗಿಸಬೇಕು. ಇದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಬೇಕು ಎಂದರು.
ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದ ಕಾಲೇಜಿನ ಸಲಹಾ ಸಮಿತಿ ಉಪಾಧ್ಯಕ್ಷರಾದ ಎಸ್.ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಧ ಎಲ್.ಹೆಚ್.ಅರುಣಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರಾತಾ ಇಲಾಖೆಯ ಉಪನಿರ್ದೇಶಕರಾದ ಜಿ.ಕೊಟ್ರೇಶ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವಾಧ್ಯಕ್ಷರಾದ ಜೆ.ಬಿ.ರಾಜ್, ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರರಾದ ಡಾ.ಕೆ.ಟಿ.ನಾಗರಾಜನಾಯ್ಕ ಉಪಸ್ಥಿತರಿದ್ದರು.