ಅಬುಜಾ: ವಾಯುವ್ಯ ನೈಜೀರಿಯಾದಲ್ಲಿ ಧಾರ್ಮಿಕ ಸಭೆಯನ್ನು ತಪ್ಪಾಗಿ ಗುರಿಯಾಗಿಸಿದ ಪರಿಣಾಮ ನೈಜೀರಿಯಾ ಸೇನೆಯ ಡ್ರೋನ್ ದಾಳಿಯಲ್ಲಿ 85 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಭಾನುವಾರ ಸಂಜೆ ತುಂಡೂನ್ ಬಿರಿಯ ಗ್ರಾಮಸ್ಥರು ಪ್ರವಾದಿ ಮುಹಮ್ಮದ್ ಜನ್ಮದಿನ ಧಾರ್ಮಿಕ ಉತ್ಸವಕ್ಕಾಗಿ ಜೊತೆ ಸೇರಿರುವಾಗ ವಾಯುದಾಳಿ ಸಂಭವಿಸಿದೆ.
ಕಡುನಾ ರಾಜ್ಯದ ತುಡುನ್ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಸೇನೆ ದಾಳಿ ನಡೆಸುತ್ತಿತ್ತು. ಈ ವೇಳೆ ಸೇನೆಯ ಡ್ರೋನ್ ದಾಳಿ ಗುರಿ ತಪ್ಪಿ ನಾಗರಿಕರ ಸಾವಿಗೆ ಕಾರಣವಾಗಿದೆ. ನೈಜೀರಿಯಾದ ಸಂಘರ್ಷದ ಪ್ರದೇಶದಲ್ಲಿ ನಡೆದ ಮಾರಣಾಂತಿ ದಾಳಿಯ ಕುರಿತು ತನಿಖೆ ನಡೆಸುವಂತೆ ದೇಶದ ಅಧ್ಯಕ್ಷರು ಆದೇಶಿಸಿದ್ದಾರೆ.
ಡ್ರೋನ್ ದಾಳಿಯಲ್ಲಿ ಕನಿಷ್ಟ 66 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ. ಮೃತಪಟ್ಟ 85 ಮಂದಿ ನಾಗರಿಕರ ಪೈಕಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದ್ದಾರೆ. ಇನ್ನು ದಾಳಿಯಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇನ್ನು ನೈಜೀರಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತೌರೀದ್ ಲಗ್ಬಾಜಾ ಅವರು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸೇನೆಯ ಡ್ರೋನ್ ದಾಳಿಗೆ ಕ್ಷಮೆ ಕೋರಿದ್ದಾರೆ.