ಪಂಜಾಬ್: ಪಂಜಾಬ್‌ನ ಕಪುರ್ಥದಲ್ಲಿರುವ ಗುರುದ್ವಾರವೊಂದರಲ್ಲಿ ನಿಹಾಂಗ್ ಸಿಖ್ಖರ ಗುಂಪುಗಳ ಮಧ್ಯೆಯೇ ಭಾರಿ ಗಲಾಟೆ ನಡೆದಿದೆ.
ಇದೇ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ತೆರಳಿದ ಪೊಲೀಸರ ಮೇಲೆಯೇ ಗುಂಡು ಹಾರಿಸಲಾಗಿದ್ದು, ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನೂ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಗುರುದ್ವಾರದ ಮಾಲೀಕತ್ವದ ವಿಷಯಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಿಖ್ಖರ ಎರಡು ಗುಂಪುಗಳ ಮಧ್ಯೆಯೇ ಗಲಾಟೆ ನಡೆದಿದೆ. ಮತ್ತೊಂದೆಡೆ, ಗುರುದ್ವಾರಕ್ಕಾಗಿ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಪೊಲೀಸರು ಈಗಾಗಲೇ 10 ಆರೋಪಿಗಳನ್ನು ಬಂಧಿಸಿದ್ದಾರೆ.
ಇದರ ಬೆನ್ನಲ್ಲೇ ಗುರುದ್ವಾರ ಅಕಲ್ಪುರ ಬುಂಗಾ ಬಳಿ ನಿಹಾಂಗ್ ಸಿಖ್ಖರು ಗಲಾಟೆ ಆರಂಭಿಸಿದ್ದಾರೆ. ಆಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು, ನಿಹಾಂಗ್ ಸಿಖ್ಖರನ್ನು ಹೊರಗೆ ಕಳುಹಿಸಲು ಮುಂದಾಗಿದ್ದಾರೆ. ಇದೇ ವೇಳೆ ಪೊಲೀಸರ ಮೇಲೆಯೇ ಉದ್ರಿಕ್ತ ಗುಂಪಿನ ಸದಸ್ಯರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ರಸ್ತೆ ಮಧ್ಯೆ ನಿಂತ ಪೊಲೀಸರ ಮೇಲೆಯೇ ನಿಹಾಂಗ್ ಸಿಖ್ಖರು ಗುಂಡಿನ ದಾಳಿ ನಡೆಸಿದ್ದಾರೆ. ಒಬ್ಬ ಪೊಲೀಸ್ ಪೇದೆಯು ಗುಂಡಿನ ದಾಳಿಯಿಂದ ಮೃತಪಟ್ಟಿದ್ದಾರೆ.
ಮೂವರು ಪೊಲೀಸರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುದ್ವಾರದ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕಪುರ್ಥಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಬೀರ್ ಸಿಂಗ್ ಹುಂಡಾಲ್ ಮಾಹಿತಿ ನೀಡಿದ್ದಾರೆ.
ಗುರುದ್ವಾರದಲ್ಲಿ 30ಕ್ಕೂ ಅಧಿಕ ನಿಹಾಂಗ್ ಸಿಖ್ಖರು ಇದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಗುರುದ್ವಾರದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.