ಸಾಮಾನ್ಯ ವರ್ಗದ ಜನರು ಈ ದುಬಾರಿ ದುನಿಯಾದಲ್ಲಿ ಯಾವುದೇ ಕೆಲಸ ಮಾಡಬೇಕಿದ್ದರೂ ಸಾಲ ಪಡೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಅದರಲ್ಲೂ ಮನೆ ಕಟ್ಟುವಂತಹ ಬಹುದೊಡ್ಡ ಕನಸು ನನಸಾಗಲು ಬ್ಯಾಂಕ್ ಸಾಲದ ನೆರವು ಬೇಕೇ ಬೇಕು. ನಿಜ ಹೇಳಬೇಕೆಂದರೆ ಮನೆ ಕಟ್ಟಿದ ನಿಜವಾದ ಖುಷಿ ಅನುಭವಕ್ಕೆ ಬರುವುದೇ ಸಾಲ ತೀರಿಸಿದಾಗ. ಸಾಲ ತೀರಿಸಿದ ತಕ್ಷಣ ನಿಮ್ಮ ಕರ್ತವ್ಯ ಮುಗಿಯುವುದಿಲ್ಲ. ಸಾಲ ತೀರಿಸಿದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡದಿದ್ದರೆ ಭವಿಷ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಎನ್.ಒ.ಸಿ. ಪಡೆಯಬೇಕು
ಗೃಹಸಾಲದ ಎಲ್ಲಾ ಕಂತುಗಳನ್ನು ಪಾವತಿಸಿದ ಬಳಿಕ ಬ್ಯಾಂಕ್ ನಿಂದ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ.) ಅಥವಾ ನೋ ಡ್ಯೂ ಸರ್ಟಿಫಿಕೆಟ್ (ಎನ್.ಡಿ.ಸಿ.) ಪಡೆದುಕೊಳ್ಳುವುದು ಮುಖ್ಯ. ಈ ಪ್ರಮಾಣಪತ್ರ ನೀವು ಸಾಲವನ್ನು ಪೂರ್ತಿಯಾಗಿ ಪಾವತಿಸಿದ್ದೀರಿ ಮತ್ತು ನಿಮ್ಮ ಹೆಸರಿನಲ್ಲಿ ಯಾವುದೇ ಹಣ ಪಾವತಿಸಲು ಉಳಿದಿಲ್ಲ ಎನ್ನುವುದನ್ನು ದೃಢಪಡಿಸುತ್ತದೆ. ಈ ಪ್ರಮಾಣ ಪತ್ರ ಪಡೆದುಕೊಳ್ಳುವ ಮುನ್ನ ಎಲ್ಲಾ ಅಂಶಗಳು ಸರಿಯಾಗಿವೆ, ಅಕ್ಷರ ದೋಷಗಳಿಲ್ಲ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ.
ಎಲ್ಲಾ ಮೂಲ ದಾಖಲೆಗಳನ್ನು ಪಡೆದುಕೊಳ್ಳಿ
ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಪಡೆದುಕೊಂಡಿದ್ದ ಎಲ್ಲಾ ದಾಖಲೆಗಳನ್ನು ಬ್ಯಾಂಕ್ ಗೃಹಸಾಲ ಮುಕ್ತಾಯಗೊಳಿಸುವ ವೇಳೆ ವಾಪಸ್ ನೀಡಬೇಕು. ಸಾಮಾನ್ಯವಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಗಳು ಒಪ್ಪಿಸಬೇಕಾದ ದಾಖಲೆಗಳ ಪಟ್ಟಿಯನ್ನು ನೀಡುತ್ತದೆ. ಸಾಲ ತೀರಿಸಿದ ಬಳಿಕ ಈ ಪಟ್ಟಿಯನ್ನು ಗಮನಿಸಿ ಎಲ್ಲವೂ ಕೈ ಸೇರಿದೆ ಎನ್ನುವುದನ್ನು ಖಾತರಿಸಿಪಡಿಸಿಕೊಳ್ಳಿ. ಜೊತೆಗೆ ಹಾಳೆಗಳು ಕಳೆದುಹೋಗಿಲ್ಲ ಎನ್ನುವುದನ್ನು ಪರಿಶೀಲಿಸಿ. ಭದ್ರತಾ ಚೆಕ್ ತೆಗೆದಿಟ್ಟರೆ ಅದನ್ನು ವಾಪಸ್ ಪಡೆಯಿರಿ.
ಕ್ರೆಡಿಟ್ ಬ್ಯೂರೋ ಡಾಟಾ ಅಪ್ ಡೇಟ್ ನೋಡಿಕೊಳ್ಳಿ
ಗೃಹಸಾಲ ಪೂರ್ಣಗೊಳಿಸಿದ ಕೂಡಲೆ ಕ್ರೆಡಿಟ್ ಬ್ಯೂರೋದಲ್ಲಿ ನೀವು ಋಣಮುಕ್ತರಾಗಿರುವುದನ್ನು ಬ್ಯಾಂಕ್ ಅಪ್ ಡೇಟ್ ಮಾಡಿದೆಯೆ ಎನ್ನುವುದನ್ನು ಪರೀಕ್ಷಿಸಿ. ಕೆಲವೊಮ್ಮೆ ಬ್ಯಾಂಕ್ ಬ್ಯೂರೋಕ್ಕೆ ಮಾಹಿತಿ ನೀಡಲು ಮರೆತಿರಬಹುದು. ಹೀಗಾಗಿ ಅಪ್ ಡೇಟ್ ಆಗುವ ತನಕ ಬ್ಯಾಂಕ್ ನೊಂದಿಗೆ ಸಂಪರ್ಕದಲ್ಲಿರಿ.
ರಿಜಿಸ್ಟ್ರಾರ್ ಸ್ವಾಧೀನದ ಹಕ್ಕು ಖಾತರಿಪಡಿಸಿ
ಸಾಲ ಮರುಪಾವತಿಯ ಬಗ್ಗೆ ಬ್ಯಾಂಕ್ ಗೆ ಖಾತರಿ ಇಲ್ಲದಾಗ ನಿಮ್ಮ ಆಸ್ತಿಯ ಮೇಲೆ ಸ್ವಾಧೀನ ಹಕ್ಕು ಸ್ಥಾಪಿಸುತ್ತದೆ. ಇದು ಆಸ್ತಿಯನ್ನು ಅಡಮಾನವಿಡುವ ಕಾನೂನು ಹಕ್ಕನ್ನು ನೀಡುತ್ತದೆ. ಸಾಲ ಕಟ್ಟದಿದ್ದರೆ ಆಸ್ತಿ ಮಾರಾಟ ಮಾಡುವ ಹಕ್ಕು ಬ್ಯಾಂಕ್ ಗೆ ಇರುತ್ತದೆ. ಅಲ್ಲದೆ ಸಾಲ ಮುಗಿಯುವ ತನಕ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ. ಆದ್ದರಿಂದ ಸಾಲ ಮುಗಿದ ತಕ್ಷಣ ಸ್ಥಳೀಯ ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರಾರ್ ಸ್ವಾಧೀನ ಹಕ್ಕನ್ನು ರದ್ದುಗೊಳಿಸಲಾಗಿದೆ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ. ಆಸ್ತಿಯ ಮೇಲಿನ ನಿಮ್ಮ ಮಾಲಕತ್ವಕ್ಕೆ ಯಾವುದೇ ಅಡ್ಡಿ ಇಲ್ಲದಂತೆ ನೋಡಿಕೊಳ್ಳಿ.
ಋಣಭಾರ ಪ್ರಮಾಣಪತ್ರ ಪಡೆಯಿರಿ
ಋಣಭಾರ ಪ್ರಮಾಣಪತ್ರ ಎನ್ನುವುದು ಗೃಹ ಸಾಲಕ್ಕಾಗಿ ಅಡಮಾನ ಇಟ್ಟ ಆಸ್ತಿಗೆ ಸಂಬಂಧಿಸಿದ ಎಲ್ಲಾ ಹಣಕಾಸು ವಹಿವಾಟುಗಳ ವಿಸ್ತೃತ ದಾಖಲೆಗಳನ್ನು ಒಳಗೊಂಡಿರುವ ಕಾನೂನಾತ್ಮಕ ದಾಖಲೆ. ಸಾಲ ಮುಕ್ತಾಯಗೊಂಡ ಬಳಿಕ ಈ ಪ್ರಮಾಣಪತ್ರದಲ್ಲಿ ಎಲ್ಲಾ ಮರುಪಾವತಿಯಾಗಿರುವುದು ಕಾಣಬೇಕು. ಗೃಹಸಾಲ ಮುಗಿದ ತಕ್ಷಣ ಈ ಪ್ರಮಾಣ ಪತ್ರ ಅಪ್ ಡೇಟ್ ಮಾಡಿಕೊಳ್ಳಿ.