ಬೆಂಗಳೂರು: ಮಹಾತ್ಮಾ ಗಾಂಧಿ ಶ್ರೇಷ್ಠ ಹಿಂದೂ. ಕಾಂಗ್ರೆಸ್ ಪಕ್ಷಕ್ಕೆ ಅವರ ತತ್ಪಾದರ್ಶಗಳೇ ದಾರಿದೀಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು KPCC ಕಚೇರಿ ಕ್ವೀನ್ಸ್ ರೋಡ್ ಬೆಂಗಳೂರು ಇಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧೀಜಿಯವರ ಪುಣ್ಯ ಸ್ಮರಣೆಯ ಅಂಗವಾಗಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ,ಹಂತಕ ಗೋಡ್ಸೆ, ಗಾಂಧೀಜಿಯವರ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಅವರನ್ನು ಹತ್ಯೆಗೈದರು. ಗಾಂಧಿಜೀಯವರನ್ನು ಹತ್ಯೆಗೈದ ಗೋಡ್ಸೆಯವರನ್ನು ಆರ್ ಎಸ್ ಎಸ್ ಸಂಘಟನೆ ಹಾಗೂ ಬಿಜೆಪಿಯವರ ಆರಾಧ್ಯ ದೈವ ಎಂದು ತಿಳಿಸಿದರು.
ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುತ್ತಾರೆ. ಮಹಾತ್ಮಾ ಗಾಂಧಿಜೀ ಒಬ್ಬ ಶ್ರೇಷ್ಠ ಹಿಂದೂ. ಅಂತಹ ಹಿಂದೂ ಭಕ್ತನನ್ನೇ ಗುಂಡಿಕ್ಕಿ ಕೊಂದವರೇ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಗಾಂಧೀಜಿಯವರನ್ನು ಮಾತ್ರ ಮಹಾತ್ಮಾ ಮತ್ತು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವನದುದ್ದಕ್ಕೂ ಸತ್ಯ ಮತ್ತು ಅಹಿಂಸೆಯನ್ನು ಪಾಲಿಸಿದರು. ಗಾಂಧಿಜೀಯವರು ನುಡಿದಂತೆ ನಡೆಯುತ್ತಿದ್ದರು. ದೇಶ ವಿಭಜನೆಯಾದಾಗ ಸ್ವಾತಂತ್ರ್ಯವನ್ನು ಸಂಭ್ರಮಿಸದೇ ಹಿಂದೂ ಮುಸಲ್ಮಾನರ ನಡುವೆ ಸೌಹಾರ್ದತೆಯನ್ನು ಸ್ಥಾಪಿಸಲು ಗಾಂಧೀಜೀಯವರು ಶ್ರಮಿಸಿದರು. ಭಾರತದ ಹಿಂದೂಗಳು ಪಾಕಿಸ್ತಾನಕ್ಕೆ ಹೋಗದೇ ಇಲ್ಲಿಯೇ ಉಳಿಯಬೇಕೆಂದು ಪ್ರಯತ್ನಿಸಿದರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಒಳಿತನ್ನು ಬಯಸುವ ಹಾಗೂ ಸರ್ವ ಧರ್ಮಗಳನ್ನು ಗೌರವಿಸುವ ಪಕ್ಷ. ಮಹಾತ್ಮಾಗಾಂಧೀಜಿಯವರು ತೋರಿದ ಹಾದಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಅವರ ತತ್ಪಾದರ್ಶಗಳೇ ದಾರಿದೀಪ. ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು, ಮಾನವರಾಗಿ ಸಾಮರಸ್ಯದಿಂದ ಬಾಳುವುದೇ ನಮ್ಮ ಮುಂದಿರುವ ಸವಾಲು ಎಂದರು.
ಬಿಜೆಪಿಯವರು ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ರಾಮಭಕ್ತರಾಗಿದ್ದ ಗಾಂಧೀಜಿಯವರ ಹತ್ಯೆಗೈದ ಗೋಡ್ಸೆಯನ್ನು ಪಾಲಿಸುವವರನ್ನು ಜನರು ನಂಬುವುದಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವ ರಾಮನ ಆದರ್ಶವನ್ನು ನಿಜಅರ್ಥದಲ್ಲಿ ಪಾಲಿಸುವ ನಾನು ಜನವರಿ 22 ರಂದು ನೂತನ ಶ್ರೀರಾಮ ಮಂದಿರವನ್ನು ಸ್ಥಳೀಯವಾಗಿ ಉದ್ಘಾಟಿಸಿದೆ. ‘ಜೈ ಶ್ರೀರಾಮ್ ’ ಎಂಬುದು ಬಿಜೆಪಿಯವರ ಸ್ವತ್ಥಲ್ಲ. ಮಹಾತ್ಮಾ ಗಾಂಧೀಜಿಯವರೇ ‘ಹೇ ರಾಮ್’ ಎಂದು ಹೇಳಿದ್ದರು.