ಗೋವಾ: ತಮ್ಮ ಮಗುವಿಗೆ ‘ಇಂಡಿಯಾ’ ಎಂದು ನಾಮಕರಣ ಮಾಡಿ ಭಾರತೀಯರ ಮನಗೆದ್ದಿದ್ದ ಖ್ಯಾತ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಜಾಂಟಿ ರೋಡ್ಸ್ ಇದೀಗ ಭಾರತದಲ್ಲೇ ಮನೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಭಾರತ, ಇಲ್ಲಿನ ಜನತೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಮೇಲೆ ಈ ಮೊದಲಿನಿಂದಲೂ ಆಕರ್ಷಿತರಿರುವ ಜಾಂಟಿ ರೋಡ್ಸ್, ಇದೀಗ ಗೋವಾದಲ್ಲೇ ಮನೆ ಮಾಡುವ ಮೂಲಕ ಭಾರತದ ಬೆಳಗು ಕಾಣ ಹೊರಟಿದ್ದಾರೆ. ಗೋವಾದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಬಾಡಿಗೆಗೆ ಗೋವಾದ ಬೀದಿಗಳಲ್ಲಿ ಸುತ್ತುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಜಾಂಟಿ ರೋಡ್ಸ್ ಪೋಸ್ಟ್ ಗಳನ್ನ ಹಂಚಿಕೊಂಡಿದ್ದಾರೆ. ದಕ್ಷಿಣ ಗೋವಾದ ಕಾನಕೋಣದ ಅಗೊಂದಾದಲ್ಲಿ ಜಾಂಟಿ ರೋಡ್ಸ್ ಮನೆ ಮಾಡಿದ್ದು, ಆಗೊಂದಾದ ರಸ್ತೆಗಳಲ್ಲಿ ಸುತ್ತಾಡುತ್ತಾ ಎಕ್ಸ್ ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಅಗೊಂದಾದಲ್ಲಿ ಮನೆ ಮಾಡಿರುವ ಬಗ್ಗೆ ಖುದ್ದು ಜಾಂಟಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಇದು ಸಮ್ಮರ್ ವೆಕೇಶನ್ ಅಲ್ಲ, ಆರು ತಿಂಗಳಿಗಾಗಿ ನಾನಿಲ್ಲಿಗೆ ಶಿಫ್ಟ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. 1992ರಿಂದ 2003ರವರೆಗಿನ ಜಾಂಟಿ ಕ್ರಿಕೆಟ್ ವೃತ್ತಿಜೀವನದಲ್ಲಿ 52 ಟೆಸ್ಟ್ ಮತ್ತು 245 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು, ಏಕದಿನ ಪಂದ್ಯಗಳಲ್ಲಿ 5,935 ರನ್ ಮತ್ತು ಟೆಸ್ಟ್‌ಗಳಲ್ಲಿ 2,532 ರನ್‌ಗಳನ್ನು ಗಳಿಸಿದ್ದಾರೆ.