ಬೆಂಗಳೂರು : ಗ್ಯಾರಂಟಿ ಯೋಜನೆ ಜಾರಿಯಿಂದ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ನಿರಾಸೆಯಾಗಿದೆ.
ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕೆಂಬ ಚರ್ಚೆ ಜೋರಾಗಿಯೇ ನಡೆದಿದೆ. ಆಡಳಿತ ಪಕ್ಷದ ಶಾಸಕರು, ಮುಖಂಡರು ಕೂಡ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಬಗ್ಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಟೀಕಿಸಿದ ಬಿಜೆಪಿ ಪರವಾಗಿ ಜನ ಮತ ಹಾಕಿದ್ದಾರೆ. ಹೀಗಾಗಿ, ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು ಎಂದು ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಹೇಳಿದ್ದಾರೆ. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ ಎಂಬುದನ್ನು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಗ್ಯಾರಂಟಿ ವಿರುದ್ಧ ಮಾತನಾಡುತ್ತಿದ್ದ ಬಿಜೆಪಿಯವರನ್ನು ಜನ ಬೆಂಬಲಿಸಿದ್ದಾರೆ.
ಜನರಿಗೆ ನಮ್ಮ ಗ್ಯಾರಂಟಿ ಇಷ್ಟವಾಗಿಲ್ಲ. ಹೀಗಾಗಿ, ಗ್ಯಾರಂಟಿ ನಿಲ್ಲಿಸುವುದೇ ಒಳ್ಳೆಯದು ಎಂದು ಅವರು ಹೇಳಿದ್ದು, ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮರು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ. ಆಡಳಿತ ಪಕ್ಷದ ಅನೇಕ ಶಾಸಕರು ಕೂಡ ಗ್ಯಾರಂಟಿ ಯೋಜನೆ ಸ್ಥಗಿತದ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ಸಿಎಂ ಸೇರಿದಂತೆ ಅನೇಕರು ಗ್ಯಾರಂಟಿ ಯೋಜನೆ ಮುಂದುವರೆಸುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.