ಚಿತ್ರದುರ್ಗ :ಇಂದಿನ ತಂತ್ರಜ್ಞಾನ ಯುಗದಲ್ಲಿ ಆನ್‍ಲೈನ್ ಮೂಲಕ ಗ್ರಾಹಕರಿಗೆ ವಂಚನೆಯಾಗುತ್ತಿದೆ. ಇದೇ ನಿಟ್ಟಿನಲ್ಲಿ ಗ್ರಾಹಕರಿಗೆ ಉಂಟಾಗುವ ಮೋಸ ಹಾಗೂ ಶೋಷಣೆ ತಪ್ಪಿಸಲು ಕೃತಕ ಬುದ್ಧಿಮತ್ತೆ ಸಹಾಯಕವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ. ಗೀತಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಜಾನ್ ಎಫ್. ಕೆನಡಿ 1962 ಮಾರ್ಚ್ 15 ರಂದು ಅಮೇರಿಕಾದ ಸಂಸತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಹಕರ ಹಕ್ಕುಗಳ ಕುರಿತು ಧ್ವನಿ ಎತ್ತಿದರು. ಇದರ ನೆನಪಿಗಾಗಿ 1983 ರಿಂದ ಪ್ರತಿ ವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕರ ದಿನಾಚರಣೆ ಆಚರಿಸಲಾಗುತ್ತದೆ. ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಹಾಗೂ ವಿಶ್ವ ಗ್ರಾಹಕರ ದಿನಾಚರಣೆ ಎರಡು ಬೇರೆ ಬೇರೆಯಾಗಿವೆ. ಪ್ರತಿ ವರ್ಷ ವಿಶ್ವ ಗ್ರಾಹಕರ ದಿನದಂದು ಒಂದು ಧ್ಯೇಯ ವಾಕ್ಯ ಇರುತ್ತದೆ. ಈ ಬಾರಿ ಧ್ಯೇಯ ವಾಕ್ಯ “ಗ್ರಾಹಕರಿಗಾಗಿ ನ್ಯಾಯ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ” ಎಂಬುದಾಗಿದೆ. ಗ್ರಾಹಕರಿಗೆ ಆಗುವ ಮೋಸ, ಶೋಷಣೆ ತಪ್ಪಿಸುವ ಸಲುವಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಎಲ್ಲೆಡೆ ಹೆಚ್ಚಾಗಲಿದೆ. ಗ್ರಾಹಕರಿಗೆ ಉತ್ತಮ ಸರಕು ಸೇವೆಗಳು ದೊರಕಬೇಕು. ಅನ್ಯಾಯ ಹಾಗೂ ತೊಂದರೆ ಉಂಟಾಗಬಾರದು. ಗ್ರಾಹಕರ ಹಿತರಕ್ಷಣೆಯೇ ಗ್ರಾಹಕರ ಕಾಯ್ದೆಯ ಮುಖ್ಯ ಅಂಶವಾಗಿದೆ. ಈ ಕಾರಣಕ್ಕಾಗಿ ದೇಶದಲ್ಲಿ ಗ್ರಾಹಕರ ಹಿತರಕ್ಷೆಣೆಯ ಕಾಯ್ದೆ ಜಾರಿ ಮಾಡಲಾಗಿದೆ ಎಂದರು