ಬೆಳಗಾವಿ ತಾಲೂಕು ಕಲಖಾಂಬ (Kalakhamba) ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ (petrol bomb) ಎಸೆದು ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಕಚೇರಿಯ ಪೀಠೋಪಕರಣಕ್ಕೆ ಹಾನಿಯಾಗಿದ್ದು, ಈ ವಿಷಯ ಶನಿವಾರ ಸ್ಥಳೀಯರಿಗೆ ಗೊತ್ತಾಯಿತು. ಪೆಟ್ರೋಲ್ ತುಂಬಿ ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಿಟಕಿಯ ಮೂಲಕ ಒಳಗೆ ಎಸೆಯಲಾಗಿದೆ. ಟೇಬಲ್, ಕುರ್ಚಿಗಳಿಗೆ ಹಾನಿಯಾಗಿದ್ದು, ಆದರೆ ಕಾಗದ ಪತ್ರಗಳಿಗೆ (papers) ಯಾವುದೇ ಹಾನಿಯಾಗಿಲ್ಲ.
ದಿ. 08 ರಂದು ಗ್ರಾ.ಪಂ.ನಲ್ಲಿ ಎರಡು ಗುಂಪುಗಳ ಮಧ್ಯೆ ತೀವ್ರ ಗಲಾಟೆ ಆಗಿರುವ ಮಾಹಿತಿ ದೊರೆತಿದ್ದು, ಅದೇ ವಿಚಾರಕ್ಕೆ ತಡರಾತ್ರಿ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ. ನಿನ್ನೆ ತಡರಾತ್ರಿ ಆಗಮಿಸಿದ್ದ ಕಿಡಿಗೇಡಿಗಳು ಬಿಯರ್ ಬಾಟಲ್‌ನಲ್ಲಿ (Beer Bottle) ಪೆಟ್ರೋಲ್ ಸುರಿದು ಬಟ್ಟೆ ಹಾಕಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಗ್ರಾಮ ಪಂಚಾಯತಿ ಆವರಣ ಹಾಗೂ ಒಳಗಡೆ ಬಿಯರ್ ಬಾಟಲ್ ಗಳು ಪತ್ತೆಯಾಗಿವೆ.
ಗ್ರಾಮ ಪಂಚಾಯಿತಿಗೆ ಪೆಟ್ರೋಲ್ ಬಾಂಬ್ ಎಸೆದ ಘಟಗೂ ನಿನ್ನೆ ನಡೆದ ಗುಂಪುಗಳ ನಡುವೆ ನಡೆದ ಘಟನೆಗೂ ಸಂಬಂಧ ಇರಬಹುದು ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಸಿಸಿಟಿವಿ ಕ್ಯಾಮರಾ (CCTV camera) ಕಿತ್ತು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.