ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರ ಆಹ್ವಾನದ ಮೇರೆಗೆ ಇಂದು ಗ್ರೀಸ್‌ಗೆ ಭೇಟಿ ನೀಡಿದ್ದಾರೆ.
ಸುಮಾರು 40 ವರ್ಷಗಳ ಬಳಿಕ ಭಾರತದ ಪ್ರಧಾನಿ ಗ್ರೀಸ್‌ಗೆ ಭೇಟಿ ನೀಡಿದ್ದು, ಗ್ರೀಸ್ನಲ್ಲಿರುವ ಭಾರತೀಯರೊಂದಿಗೆ ಮೋದಿ ಅವರು ಸಂವಾದ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಅವರು ಭಾರತ ಮತ್ತು ಗ್ರೀಸ್ ನಾಗರಿಕತೆಯ ಸಂಬಂಧಗಳನ್ನು ಒಗ್ಗೂಡಿಸಲು ಮತ್ತು ಇತ್ತೀಚಿನ ವರ್ಷಗಳಲ್ಲಿ ಸಮುದ್ರ ಸಾರಿಗೆ, ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆಗಳು ಮತ್ತು ಸಮುದಾಯಗಳ ನಡುವಿನ ಸಂಬಂಧವನ್ನು ಬಲಪಡಿಸುವ ಸಲುವಾಗಿ ಈ ಭೇಟಿ ಎನ್ನಲಾಗಿದೆ.
ಪ್ರಧಾನಿ ಮೋದಿ ಅವರು ಆಫ್ರಿಕಾದಿಂದ ಗ್ರೀಸ್ನ ಅಥೆನ್ಸ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಗ್ರೀಕ್ ವಿದೇಶಾಂಗ ಸಚಿವ ಜಾರ್ಜ್ ಗೆರಾಪೆಟ್ರಿಟಿಸ್ ಮತ್ತು ಭಾರತೀಯರು ಬರಮಾಡಿಕೊಂಡರು.
ಇನ್ನು ಪ್ರಧಾನಿ ಮೋದಿ ಅವರು ಅಥೆನ್ಸ್ ವಿಮಾನ ನಿಲ್ದಾಣದಲ್ಲಿ ಭಾರತೀಯರು ಸ್ವಾಗತಿಸಿದ ಪರಿಯನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಭಾರತ-ಗ್ರೀಸ್ ಸ್ನೇಹವನ್ನು ಗಾಢಗೊಳಿಸುವ ಉದ್ದೇಶದಿಂದ ಗ್ರೀಸ್‌ಗೆ ಭೇಟಿ ನೀಡಿದ್ದೇನೆ. ನಾನು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದೇನೆ ಮತ್ತು ಇಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲಿದ್ದೇನೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮೋದಿ ಅಥೆನ್ಸ್‌ನಲ್ಲಿರುವ ಗ್ರಾಂಡೆ ಬ್ರೆಟಾಗ್ನೆ ಹೋಟೆಲ್ ನಲ್ಲಿ ಭಾರತೀಯ ಸಮುದಾಯದ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೇ ಭಾರತೀಯ ಮತ್ತು ಗ್ರೀಸ್ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದು, ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ಹೇಳಲಾಗಿದೆ.