ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಐದು ನಗರ ಪಾಲಿಕೆಗಳ 369 ವಾರ್ಡ್ ಗಳ ಕರಡು ಮೀಸಲಾತಿ ಪಟ್ಟಿ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದ್ದು, ಈ ಮೂಲಕ ಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದೆ.
ಜನವರಿ 23ರೊಳಗೆ ಸಾರ್ವಜನಿಕರು ಮೀಸಲಾತಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ಎಲ್ಲಾ ವಿಭಾಗಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಸ್ಥಾನ ಮೀಸಲಾಗಿದೆ. ಮಹಿಳೆಯರು ಸೇರಿದಂತೆ ಅನುಸೂಚಿತ ಜಾತಿ ಎಸ್‌ಸಿಗೆ 43 ವಾರ್ಡ್, ಎಸ್.ಟಿ.ಗೆ 7 ವಾರ್ಡ್, ಹಿಂದುಳಿದ ವರ್ಗ(ಎ)ಕ್ಕೆ 97 ವಾರ್ಡ್, ಹಿಂದುಳಿದ ವರ್ಗ(ಬಿ)ಕ್ಕೆ 24 ವಾರ್ಡ್ ಸಾಮಾನ್ಯರಿಗೆ 198 ವಾರ್ಡ್ ಗಳನ್ನು ಮೀಸಲಾಗಿಡಲಾಗಿದೆ. ಒಟ್ಟಾರೆ ಎಲ್ಲಾ ವಿಭಾಗಗಳಿಂದ ಮಹಿಳೆಯರಿಗೆ 176 ವಾರ್ಡ್ ಗಳನ್ನು ಮೀಸಲಿಡಲಾಗಿದೆ.
ಕೇಂದ್ರ ಪಾಲಿಕೆಯಲ್ಲಿ 63, ಪೂರ್ವ ಪಾಲಿಕೆಯಲ್ಲಿ 50, ಪಶ್ಚಿಮ ಪಾಲಿಕೆಯಲ್ಲಿ 112, ಉತ್ತರ ಪಾಲಿಕೆಯಲ್ಲಿ 72, ದಕ್ಷಿಣ ಪಾಲಿಕೆಯಲ್ಲಿ 72 ಸೇರಿ ಒಟ್ಟು 369 ವಾರ್ಡ್ ಗ ಇವೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಅನ್ವಯ ಮೀಸಲಾತಿ ನಿಗದಿಪಡಿಸಲಾಗಿದೆ. ಯಾವುದೇ ಆಕ್ಷೇಪಣೆ, ಸಲಹೆ ಸಲ್ಲಿಸುವವರು ತಮ್ಮ ಪೂರ್ಣ ವಿಳಾಸ ಮತ್ತು ಸಹಿಯೊಂದಿಗೆ ಸೂಕ್ತ ಕಾರಣವನ್ನು ಲಿಖಿತ ರೂಪದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ಬೆಂಗಳೂರು-1 ಇವರಿಗೆ ಜನವರಿ 23ರ ಸಂಜೆ 5:30ರ ಒಳಗೆ ಸಲ್ಲಿಸುವಂತೆ ಜಿಬಿಎ ಸೂಚಿಸಿದೆ.
































