ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತಗೊಂಡಿವೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸರಕಾರ ಮುಂದೆ ಹೋಗುತ್ತಿಲ್ಲ. ಚಕ್ರದಲ್ಲಿ ಗಾಳಿ ಇಲ್ಲದೆ ಮುಂದೆ ಹೋಗದ ವಾಹನದಂತಾಗಿದೆ ಸರಕಾರದ ಪರಿಸ್ಥಿತಿ ಎಂದು ಟೀಕಿಸಿದರು.
ಅಪಾರ ಭರವಸೆ ನೀಡಿದ ನಂತರ ಅಧಿಕಾರಕ್ಕೆ ಬಂದ ಈ ಸರಕಾರವು ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಸಿದ್ದರಾಮಯ್ಯನವರು ಎರಡನೇ ಅವಧಿಯಲ್ಲಿ ಪಕ್ಷದ ಮೇಲೆ ಹಿಡಿತ ಇಲ್ಲದ, ಸರಕಾರದ ಮೇಲೆ ನಿಯಂತ್ರಣ ಇಲ್ಲದ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಲೇವಡಿ ಮಾಡಿದರು.
ಉಚಿತ ಬಸ್ ಪ್ರಯಾಣ ಯೋಜನೆ ಹೊರತುಪಡಿಸಿದರೆ. ಗೃಹಲಕ್ಷ್ಮಿ ಯೋಜನೆಯು ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲ. ಬರಿಯ ಉಚಿತ ಕೊಡುಗೆಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ಮಾಡುತ್ತಿದ್ದಾರೆ. ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಉಚಿತವಾಗಿ ವಿದ್ಯುತ್ ಕೊಡುವುದಾಗಿ ಹೇಳಿದವರು ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬರಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸೇರಿ ಒಬ್ಬರೇ ಒಬ್ಬ ಸಚಿವರೂ ಹೋಗಿ ಅಲ್ಲಿನ ವಾಸ್ತವಿಕ ಸ್ಥಿತಿ ತಿಳಿಯಲಿಲ್ಲ. ಸರಕಾರ ದಿವಾಳಿಯಾಗಿದ್ದು, ಎಂಎಲ್‍ಎ ಅನುದಾನದ ಎರಡು ಕೋಟಿ ಪೈಕಿ ಕೇವಲ 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದಾರೆ.
ಐಟಿ ದಾಳಿಯಲ್ಲಿ 100 ಕೋಟಿ ಲಭಿಸಿದ್ದು, ಸರಕಾರದ ಭ್ರಷ್ಟಾಚಾರ ಬಯಲಾಗಿದೆ. ಲೂಟಿಕೋರ ಸರಕಾರ ಇದೆಂದು ಸಾಬೀತಾಗಿದೆ ಎಂದರು.
ನಾಯಕತ್ವಕ್ಕಾಗಿ ಎರಡು ಬಣಗಳ ಜಗ್ಗಾಟ
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಡುವೆ ನಾಯಕತ್ವಕ್ಕಾಗಿ ಬಣಗಳ ಜಗ್ಗಾಟ ನಡೆಯುತ್ತಿದೆ. ಅದು ಈಗ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರೆದಿದೆ. ಉಪ ಮುಖ್ಯಮಂತ್ರಿ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಆರಂಭವಾಗಿದೆ ಎಂದು ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಕರ್ನಾಟಕಕ್ಕೆ ಭೇಟಿ ಕೊಡುತ್ತಿದ್ದು, ಕಾಂಗ್ರೆಸ್ ಪಾಲಿಗೆ ರಾಜ್ಯ ಸರಕಾರ ಎಟಿಎಂನಂತಾಗಿದೆ. ಕಲೆಕ್ಷನ್ ಟಾರ್ಗೆಟ್ ನೀಡಲು ರಾಜ್ಯಕ್ಕೆ ಅವರು ಭೇಟಿ ಕೊಡುತ್ತಿದ್ದಾರೆ ಎಂದು ಎಲ್ಲರಿಗೂ ಮನವರಿಕೆ ಆಗಿದೆ ಎಂದು ಹೇಳಿದರು.
ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಶಾಸಕರಾದ ಉದಯ್ ಗರುಡಾಚಾರ್ಯ, ಎಸ್.ಆರ್. ವಿಶ್ವನಾಥ್, ಎಸ್ ರಘು, ರವಿಸುಬ್ರಹ್ಮಣ್ಯ, ಎಸ್.ಮುನಿರಾಜು, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಉಪಸ್ಥಿತರಿದ್ದರು.