ಬೆಂಗಳೂರು : ನಮ್ಮ ಮೆಟ್ರೋದ ನೇರಳೆ ಮಾರ್ಗದ ವಿಸ್ತರಿತ ಭಾಗ ಕೆಂಗೇರಿಯಿಂದ-ಚಲ್ಲಘಟ್ಟ ಹಾಗೂ ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ ಇಂದು ಬೆಳಗ್ಗೆ 5 ಗಂಟೆಯಿಂದ ಪೂರ್ಣ ಪ್ರಮಾಣದಲ್ಲಿ ಜನಸಂಚಾರಕ್ಕೆ ಮುಕ್ತವಾಗಿದೆ.
ಔಪಚಾರಿಕ ಉದ್ಘಾಟನೆ ಇಲ್ಲದೆ 2.10 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು 2.5 ಕಿ.ಮೀ. ಉದ್ದದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಿದೆ. ಇದರಿಂದ ಸಂಪೂರ್ಣ ನೇರಳೆ ಮಾರ್ಗ ವೈಟ್‌ಫೀಲ್ಡ್ (ಪೂರ್ವ) -ಚಲ್ಲಘಟ್ಟ (ಪಶ್ಚಿಮ) ಭಾಗ 43.49 ಕಿ.ಮೀ.ಗೆ ವಿಸ್ತರಣೆಯಾಗಿದ್ದು, ಇದು ವೈಟ್ ಫಿಲ್ಡ್ ಭಾಗದ ಐಟಿ ಉದ್ಯೋಗಿಗಳು ಹಾಗೂ ಜನತೆ ಹೆಚ್ಚಿನ ಅನುಕೂಲವಾಗಿದೆ
ವೈಟ್‌ಫೀಲ್ಡ್‌ನಿಂದ ನೇರವಾಗಿ ಚಲ್ಲಘಟ್ಟದವರೆಗೆ ಯಾವುದೇ ತಡೆಯಿಲ್ಲದೆ ಪ್ರಯಾಣಿಕರು ಸಂಚರಿಸಬಹುದಾಗಿದೆ. ಸಂಚಾರ ದಟ್ಟಣೆ ಇಲ್ಲದ ವೇಳೆಯೂ ವೈಟ್‌ಫೀಲ್ಡ್‌ನಿಂದ ಪಟ್ಟಂದೂರು ಅಗ್ರಹಾರ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ರೈಲು ಸಂಚರಿಸಲಿದೆ. ದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಂ.ಜಿ.ರಸ್ತೆ ಮಾರ್ಗದಲ್ಲಿ ಪ್ರತಿ 3 ನಿಮಿಷಕ್ಕೆ ಒಂದು ರೈಲು ಸಂಚಾರ ಆಗಲಿದೆ. ಮೈಸೂರು ರಸ್ತೆಯಿಂದ ಚಲ್ಲಘಟ್ಟ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.