ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ದೂರು ಬಂದ ಹಿನ್ನೆಲೆ ನಟ ದರ್ಶನ್ ಗೆ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ 10 ದಿನದೊಳಗೆ ಉತ್ತರ ನೀಡುವಂತೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ಬೆಳ್ಳಿಪರ್ವ ಕಾರ್ಯಕ್ರಮದಲ್ಲಿ ನಟ ದರ್ಶನ್ ‘ಇವತ್ತು ಇವಳು ಇರ್ತಾಳೆ, ನಾಳೆ ಅವಳು ಬರ್ತಾಳೆ’ ಎಂದು ಹೇಳಿರುವ ಹೇಳಿಕೆಯನ್ನು ಗೌಡತಿ ಸೇನೆಯ ಸಂಘಟನೆ ಆಕ್ಷೇಪಿಸಿತ್ತು. ಇದು ಅವಹೇಳನಕಾರಿ ಎಂದು ಹೇಳಿದೆ. ಪತ್ನಿ ವಿಜಯಲಕ್ಷ್ಮಿ ಮತ್ತು ಪ್ರೇಯಸಿ ಪವಿತ್ರಾ ಗೌಡ ನಡುವೆ ಆನ್ ಲೈನ್ ನಲ್ಲಿ ನಡೆದ ಮಾತಿನ ಚಕಮಕಿಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದರ್ಶನ್ ಹಲವಾರು ಯುವಕರಿಗೆ ಮಾದರಿಯಾಗಿದ್ದಾರೆ. ನಟ ದರ್ಶನ್ ಸಾವಿರಾರು ಜನರ ಮುಂದೆ ಇಂತಹ ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ. ನಟ ದರ್ಶನ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಸಂಘಟನೆಯ 13 ಸದಸ್ಯರು ಮಹಿಳಾ ಆಯೋಗದ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ರಾಜ್ಯ ಮಹಿಳಾ ಆಯೋಗ ನಟ ದರ್ಶನ್‌ಗೆ ನೋಟಿಸ್ ಜಾರಿ ಮಾಡಿದೆ.