ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಚಿಕನ್ ಬೆಲೆ ಗಗನಕ್ಕೆ ಏರುತ್ತಿರುವುದು ಗೊತ್ತೆ ಇದೆ. ಈಗ ತರಕಾರಿ ಮತ್ತು ಹಣ್ಣುಗಳ ಬೆಲೆ ಕೂಡ ಗಗನಕ್ಕೇರಿದೆ. ಪ್ರತಿಕೂಲ ಹವಾಮಾನದಿಂದಾಗಿ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡಿದೆ.
ಮಳೆ ಶುರುವಾಗಿ ಕೆಲವೆ ದಿನಗಳಲ್ಲಿ ಕಾಣೆಯಾಗಿದೆ. ಮತ್ತೆ ಸುಡೋ ಸುಡೋ ಬಿಸಿಲು ಬಂದಿದೆ. ಇದೆ ಕಾರಣಕ್ಕೆ ತರಕಾರಿ ಬೆಲೆ ಹೆಚ್ಚಾಗುತ್ತಿದೆ. ಇದು ಇನ್ನೂ ಒಂದು ತಿಂಗಳ ಕಾಲ ಮುಂದುವರಿಯಬಹುದು ಎಂದು ತೋಟಗಾರಿಕಾ ಇಲಾಖೆ ಮತ್ತು ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಹಾಪ್‌ಕಾಮ್ಸ್) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಈಗ ಒಂದು ಕೆಜಿ ಬೀನ್ಸ್ 220 ರೂ.ಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕೆಜಿಗೆ 250 ರಿಂದ 290 ರೂಪಾಯಿಯಿದೆ. ಅದೇ ರೀತಿ, ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಕೆಜಿಗೆ 280 ರಿಂದ 320 ರೂಪಾಯಿಯಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈಗ ಕೊತ್ತಂಬರಿ ಸೊಪ್ಪು, ಪ್ರತಿ ಕಟ್ಟಿಗೆ 100 ರೂಪಾಯಿಗೆ ಮಾರಾಟವಾಗುತ್ತಿದೆ.
ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೆಂತ್ಯೆ ಸೊಪ್ಪು ಕೆಜಿಗೆ 220 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಟ್ಟಿಗೆ 120 ರಿಂದ 150 ರೂಪಾಯಿಗೆ ಸಿಗುತ್ತಿದೆ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಶುಂಠಿ ಕೆಜಿಗೆ 195 ಮತ್ತು ಬೆಳ್ಳುಳ್ಳಿ ಕೆಜಿಗೆ 338 ರೂಪಾಯಿಗೆ ಮಾರಾಟವಾಗುತ್ತಿದೆ.
ಹವಾಮಾನ ವೈಪರೀತ್ಯದಿಂದಾಗಿ ಬೆಲೆ ಹೆಚ್ಚಿದೆ ಎನ್ನುತ್ತಾರೆ ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ. “ರಾಜ್ಯದಲ್ಲಿ ಹಠಾತ್ ಮಳೆ, ಮಳೆಯ ನಂತರ ಹೆಚ್ಚಿನ ತಾಪಮಾನದಿಂದ ಬೆಳೆಗಳಿಗೆ ಹಾನಿಯಾಗಿದೆ. ರಾಮನಗರ, ಕೋಲಾರ, ಚನ್ನಪಟ್ಟಣ, ದೇವನಹಳ್ಳಿ ಮತ್ತು ಹತ್ತಿರದ ಪ್ರದೇಶಗಳಿಂದ ಬೆಂಗಳೂರಿಗೆ ಹಣ್ಣು ಮತ್ತು ತರಕಾರಿಗಳು ಪೂರೈಕೆಯಾಗುತ್ತವೆ. ತೋಟಗಾರಿಕಾ ಬೆಳೆಗಳು ಬೆಳೆಯಲು 30 ರಿಂದ 45 ದಿನಗಳು ಬೇಕಾಗುತ್ತದೆ. ಪೂರೈಕೆ ಕಡಿಮೆಯಾಗಿರುವುದರಿಂದ ಈಗ ತರಕಾರಿಗಳ ಬೆಲೆ ಹೆಚ್ಚಾಗಿದೆ” ಎಂದಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಇನ್ನು, ಈಗ ಯಾವ ತರಕಾರಿ ಬೆಳೆಗಳು ಕೊಯ್ಲಿಗೆ ಸಿದ್ಧವಾಗಿಲ್ಲ. ರೈತರು ಬೆಳೆ ಬೆಳೆಯಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಹೀಗಾಗಿ ಇನ್ನು ಬೆಲೆಯಲ್ಲಿ ಏರಿಕೆಯಾಗುತ್ತದೆ. ಇದೇ ರೀತಿಯ ಹವಾಮಾನ ಪರಿಸ್ಥಿತಿಯಿಂದಾಗಿ ಇತರ ರಾಜ್ಯಗಳಿಂದ ಆಗುತ್ತಿದ್ದ ತರಕಾರಿ ಪೂರೈಕೆಯೂ ಕಡಿಮೆಯಾಗಿದೆ. ರಾಜ್ಯದಲ್ಲಿ ಒಟ್ಟು 27.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ.