ಧಾರವಾಡ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಗೆಲುವು ಸಾಧಿಸುತ್ತಿದ್ದಂತೆ ಅಲ್ಲಿನ ಮುಸ್ಲಿಂ ವ್ಯಕ್ತಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ. ಚಿಕ್ಕೋಡಿಯಲ್ಲಿ ಕೆಲ ಮುಸ್ಲಿಂ ಕಿಡಿಗೇಡಿಗಳು ಪಾಕಿಸ್ತಾನ ಪರ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ. ಇದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ ಎಂದಿದ್ದಾರೆ. ಚಿಕ್ಕೋಡಿ ಪೊಲೀಸರು ಕೂಡಲೇ ಅಂತಹ ಕಿಡಿಗೇಡಿಗಳನ್ನು ಬಂಧಿಸಿ, ದೂರು ದಾಖಲಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಘಟನೆಗಳು ಕಾಂಗ್ರೆಸ್ ಅವಧಿಯಲ್ಲೇ ಯಾಕಾಗುತ್ತಿವೆ? ಕಾಂಗ್ರೆಸ್ ಗೆದ್ದ ತಕ್ಷಣವೇ ಈ ರೀತಿಯ ವಾತಾವರಣ ಏಕೆ ಸೃಷ್ಟಿಯಾಗುತ್ತಿದೆ? ಬೆಳಗಾವಿಯಲ್ಲೂ ಈ ಹಿಂದೆ ಕಾಂಗ್ರೆಸ್ ಗೆದ್ದಾಗಲೂ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ವಿಧಾನಸೌಧದಲ್ಲೇ ರಾಜ್ಯಸಭಾ ಸದಸ್ಯ ಗೆದ್ದಾಗಲೂ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಕಡೆ ಯಾರಾದರೂ ಗೆದ್ದರೆ ಮುಸ್ಲಿಂರಿಗೆ ಪಾಕಿಸ್ತಾನ ಪರ ಏಕೆ ಇಷ್ಟು ಉತ್ಸಾಹ ಬರುತ್ತಿದೆ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಈಗ ಭಿಕಾರಿಯಾಗಿದೆ. ಅಲ್ಲಿ ಉನ್ನಲು, ತಿನ್ನಲು ಏನೂ ಇಲ್ಲ. ಭಾರತದ ಅನ್ನ ಉಂಡು, ಇಲ್ಲಿಯೇ ಹುಟ್ಟಿ, ಎಲ್ಲ ಸೌಲಭ್ಯ ಪಡೆದು ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ ಎಂದರೆ ಅಂತವರಿಗೆ ಮಾನ ಮರ್ಯಾದೆ ಇಲ್ಲವೇ? ಸರ್ಕಾರ, ಪೊಲೀಸ್ ಇಲಾಖೆ ಕೂಡಲೇ ಇಂತವರನ್ನು ಎನ್‌ಕೌಂಟರ್ ಮಾಡಬೇಕು. ದೇಶದ್ರೋಹದ ಘೋಷಣೆ ಕೂಗಿ ಇಲ್ಲಿ ಬದುಕುತ್ತಾರೆ ಎಂದರೆ ಇದೊಂದಿ ರೀತಿಯ ಕ್ಯಾನ್ಸರ್ ಇದ್ದಂತೆ. ಇದನ್ನು ಹಾಗೇ ಬಿಟ್ಟರೆ ಅದು ಹರಡುತ್ತ ಹೋಗುತ್ತದೆ. ಇದನ್ನು ಕೂಡಲೇ ಹದ್ದುಬಸ್ತಿನಲ್ಲಿ ಇಡುವ ಕೆಲಸವನ್ನು ಸರ್ಕಾರ ಮಾಡಬೇಕು ಇಲ್ಲದೇ ಹೋದರೆ ಇದಕ್ಕೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
