ಚಿತ್ರದುರ್ಗ: ನೂತನ ಜಿಲ್ಲಾಧಿಕಾರಿಯಾಗಿ ಟಿ. ವೆಂಕಟೇಶ್ ಅಧಿಕಾರ ಸ್ವೀಕಾರ

 

ಚಿತ್ರದುರ್ಗ:     ಚಿತ್ರದುರ್ಗ ನೂತನ ಜಿಲ್ಲಾಧಿಕಾರಿಯಾಗಿ ಟಿ. ವೆಂಕಟೇಶ್ ಅವರು ಮಂಗಳವಾರದಂದು ಅಧಿಕಾರ ವಹಿಸಿಕೊಂಡರು.  ಜಿಲ್ಲಾಧಿಕಾರಿಯಾಗಿದ್ದ ದಿವ್ಯಪ್ರಭು ಜಿ.ಆರ್.ಜೆ. ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ, ವೆಂಕಟೇಶ್ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿರುವುದರಿಂದ, ಟಿ. ವೆಂಕಟೇಶ್ ಅವರು ಮಂಗಳವಾರದಂದು ಅಧಿಕಾರ ವಹಿಸಿಕೊಂಡರು.

ನೂತನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.  2015 ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಅವರು ಟಿ. ವೆಂಕಟೇಶ್ ಅವರು, ಈ ಮೊದಲು ಚಿತ್ರದುರ್ಗ ಉಪವಿಭಾಗಾಧಿಕಾರಿಯಾಗಿ, ಹರಪನಹಳ್ಳಿ ಉಪವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ ಅಪರ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ ಅಪರ ಜಿಲ್ಲಾಧಿಕಾರಿ, ರಾಜ್ಯ ಪುರಾತತ್ವ ಇಲಾಖೆ ಆಯುಕ್ತರು, ಕೆಎಸ್‍ಆರ್‍ಟಿಸಿ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಹಾಗೂ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

Advertisement

ಇದೀಗ ಚಿತ್ರದುರ್ಗ ಜಿಲ್ಲೆಗೆ ನೂತನವಾಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಬರ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು, ಅಲ್ಲದೆ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು.  ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅರ್ಹ ಎಲ್ಲ ಫಲಾನುಭವಿಗಳಿಗೆ ತಲುಪಿಸಲು ಆದ್ಯತೆ ನೀಡಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಪ್ರಭಾರ ಉಪವಿಭಾಗಾಧಿಕಾರಿ ವಿವೇಕ್, ಜಿ.ಪಂ. ಉಪಕಾರ್ಯದರ್ಶಿ ಬಿ. ಆನಂದ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೂತನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಇದಕ್ಕೂ ಮುನ್ನ ಚಳ್ಳಕೆರೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ನಾಯಕನಹಟ್ಟಿಯ ದೇವಾಲಯಕ್ಕೆ ಭೇಟಿ ನೀಡಿ, ಶ್ರೀ ತಿಪ್ಪೇರುದ್ರಸ್ವಾಮಿ ದೇವರ ದರ್ಶನ ಮಾಡಿ, ಆಶೀರ್ವಾದ ಪಡೆದುಕೊಂಡರು.  ಬಳಿಕ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ, ಅಧಿಕಾರ ವಹಿಸಿಕೊಂಡರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement