ಚಿತ್ರದುರ್ಗ : ಪ್ರವಾಸೋದ್ಯಮ ಇಲಾಖೆ ವತಿಯಿಂದ 2025-26ನೇ ಸಾಲಿನ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 13 ಅರ್ಜಿ ಸಲ್ಲಿಸಲು ಕೊನೆಯ ದಿನ.
ಈ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕಾಲ ಉದ್ಯಮಶೀಲತೆ ವಿಷಯದ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ಖರೀದಿಸಲು ರೂ.5 ಲಕ್ಷ ಸಹಾಯಧನ ನೀಡಲು ಉದ್ದೇಶಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದು, 20 ರಿಂದ 55 ವರ್ಷ ವಯೋಮಿತಿಯೊಳಗಿರಬೇಕು. ಅಲ್ಲದೆ, ಅರ್ಜಿದಾರರು ಚಾಲ್ತಿಯಲ್ಲಿರುವ ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆಗೆ ಒಟ್ಟು 10 ಅಭ್ಯರ್ಥಿಗಳ ಗುರಿ ನಿಗದಿಪಡಿಸಲಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿಯ 6 ಹಾಗೂ ಪರಿಶಿಷ್ಟ ಪಂಗಡದ 4 ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ.
ಆಸಕ್ತರು ಇದೇ ಫೆಬ್ರವರಿ 23 ರಿಂದ ಮಾರ್ಚ್ 13ರ ವರೆಗೆ ಅರ್ಜಿಗಳನ್ನು ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 13ರ ಸಂಜೆ 4.30ರ ಒಳಗೆ “ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾಮನಭಾವಿ ಬಡಾವಣೆ, ಚಿತ್ರದುರ್ಗ” ಇವರ ಕಚೇರಿಗೆ ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.































