ಚಿತ್ರದುರ್ಗ ಲೋಕಸಭಾ ಚುನಾವಣೆ: ಸಂಜೆ 5 ರ ವೇಳೆಗೆ ಅಂದಾಜು ಶೇ.67ರಷ್ಟು ಮತದಾನ ಎಲ್ಲೆಲ್ಲಿ ಎಂಬ ಮಾಹಿತಿ.!

 

ಚಿತ್ರದುರ್ಗ: ಲೋಕಸಭಾ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ನಡೆದಿದ್ದು, ಸಂಜೆ 5ರ ವೇಳೆಗೆ ಅಂದಾಜು ಶೇ.67ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಸುಗಮವಾಗಿ ಆರಂಭವಾಗುತ್ತಿದ್ದಂತೆ, ಮಹಿಳೆಯರು, ಪುರುಷರು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಇದೇ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ಉತ್ಸಾಹದಿಂದ ಬೆಳಗಿನ ತಂಪಾದ ವಾತಾವರಣದಲ್ಲಿ ಮತಗಟ್ಟೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

Advertisement

ಮತಗಟ್ಟೆಯಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಬಿರು ಬಿಸಿಲಿನಿಂದ ರಕ್ಷಣೆಗಾಗಿ ಶಾಮಿಯಾನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ವ್ಹೀಲ್ ಚೇರ್ ಹಾಗೂ ರ್ಯಾಂಪ್ ಸೌಲಭ್ಯ ಕಲ್ಪಿಸಲಾಗಿತ್ತು. ಮತಗಟ್ಟೆ ಕೇಂದ್ರಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಬೆಳಿಗ್ಗೆ 9ಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರಾಸರಿ ಮತದಾನ ಶೇ.7.33 ಮತದಾನ ದಾಖಲಾಯಿತು. ವಿಧಾನಸಭಾ ಕ್ಷೇತ್ರವಾರು ಚಳ್ಳಕೆರೆ ಶೇ.8.25, ಚಿತ್ರದುರ್ಗ ಶೇ.9.52, ಹಿರಿಯೂರು ಶೇ.7.61, ಹೊಳಲ್ಕೆರೆ ಶೇ.7.06, ಹೊಸದುರ್ಗ ಶೇ.5.37, ಮೊಳಕಾಲ್ಮುರು ಶೇ.10.28, ಪಾವಗಡ ಶೇ.6.42, ಶಿರಾ ಕ್ಷೇತ್ರದಲ್ಲಿ ಶೇ.6.33 ರಷ್ಟು ಮತದಾನವಾಯಿತು.

ಬೆಳಿಗ್ಗೆ 11 ರವರೆಗೆ ಬಿರುಸಿನ ಮತದಾನ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11ರವರೆಗೆ ಬಿರುಸಿನ ಮತದಾನ ದಾಖಲಾಯಿತು. ಲೋಕಸಭಾ ಕ್ಷೇತ್ರದ ಸರಾಸರಿ ಮತದಾನ ಶೇ.21.75ಕ್ಕೆ ಏರಿಕೆಯಾಯಿತು. ವಿಧಾನಸಭಾ ಕ್ಷೇತ್ರವಾರು ಚಳ್ಳಕೆರೆ ಶೇ.22.55, ಚಿತ್ರದುರ್ಗ ಶೇ.23.73, ಹಿರಿಯೂರು ಶೇ.20.79, ಹೊಳಲ್ಕೆರೆ ಶೇ.20.51, ಹೊಸದುರ್ಗ ಶೇ.17.89, ಮೊಳಕಾಲ್ಮುರು ಶೇ.26.77, ಪಾವಗಡ ಶೇ.20.51, ಶಿರಾ ಶೇ.19.90 ರಷ್ಟು ಮತದಾನವಾಗಿದ್ದು, ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬಿರು ಬಿಸಿಲಿನ ನಡೆವೆಯೂ ಮತದಾರರು ಮತಗಟ್ಟೆಗೆ ಆಗಮಿಸಿ ಸಂತಸದಿಂದ ಮತ ಚಲಾಯಿಸಿದರು.

ಬಿಸಿಲಾಘಾತಕ್ಕೂ ಕುಗ್ಗದ ಮತದಾನ: ಮಧ್ಯಾಹ್ನ 1ಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರಾಸರಿ ಮತದಾನ ಶೇ.39.5 ರಷ್ಟು ಮತದಾನ ನಡೆಯಿತು. ಬಿಸಿಲಾಘಾತದ ನಡುವೆಯೂ ಕುಗ್ಗದೆ ಮತದಾರರು ಮತಗಟ್ಟೆಗೆ ಧಾವಿಸಿ, ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಚಳ್ಳಕೆರೆ ಕ್ಷೇತ್ರದಲ್ಲಿ ಶೇ.39.94, ಚಿತ್ರದುರ್ಗ ಶೇ.40.21, ಹಿರಿಯೂರು ಶೇ.37.58, ಹೊಳಲ್ಕೆರೆ ಶೇ.38.60, ಹೊಸದುರ್ಗ ಶೇ.36.21, ಮೊಳಕಾಲ್ಮುರು ಶೇ.44.28, ಪಾವಗಡ ಶೇ.36.47, ಶಿರಾ ಶೇ.37.85ರಷ್ಟು ಮತದಾನ ದಾಖಲಾಯಿತು.

ಮಧ್ಯಾಹ್ನ 3ರ ವೇಳೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರಾಸರಿ ಮತದಾನ ಶೇ.52.14 ರಷ್ಟು ಮತದಾನ ದಾಖಲಾಯಿತು. ಚಳ್ಳಕೆರೆ ಶೇ.52.72, ಚಿತ್ರದುರ್ಗ ಶೇ.51.68, ಹಿರಿಯೂರು ಶೇ.50.40, ಹೊಳಲ್ಕೆರೆ ಶೇ.53.34, ಹೊಸದುರ್ಗ ಶೇ.51.31, ಮೊಳಕಾಲ್ಮುರು ಶೇ.56.66, ಪಾವಗಡ ಶೇ.48.13, ಶಿರಾ ಶೇ.51.99 ಮತದಾನವಾಯಿತು.

ಉತ್ಸಾಹ ತೋರಿದ ಮತದಾರರು: ಸಂಜೆ 5 ರ ಹೊತ್ತಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರಾಸರಿ ಮತದಾನ ಶೇ.67ರಷ್ಟು ಮತದಾನ ದಾಖಲಾಯಿತು. ಸಂಜೆ 6 ರವರೆಗೆ ಮತ ಚಲಾಯಿಸಲು ಅವಕಾಶವಿದ್ದು, ಮತದಾರರು ಉತ್ಸಾಹ ತೋರಿ ಮತ ಚಲಾಯಿಸುತ್ತಿರುವುದು ಮತಗಟ್ಟೆಗಳಲ್ಲಿ ಕಂಡುಬಂದಿತು. ವಿಧಾನಸಭಾ ಕ್ಷೇತ್ರವಾರು ಚಳ್ಳಕೆರೆ ಶೇ. 67.86, ಚಿತ್ರದುರ್ಗ ಶೇ.65.10, ಹಿರಿಯೂರು ಶೇ.65.96, ಹೊಳಲ್ಕೆರೆ ಶೇ.67.77, ಹೊಸದುರ್ಗ ಶೇ.65.42, ಮೊಳಕಾಲ್ಮುರು ಶೇ.70.96, ಪಾವಗಡ ಶೇ.63.98, ಶಿರಾ ಶೇ. 68.34ರಷ್ಟು ಮತದಾನವಾಗಿದೆ.

ಆರೋಗ್ಯ ಸಿಬ್ಬಂದಿ ನೇಮಕ: ಬಿಸಿಲಾಘಾತದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಮತಗಟ್ಟೆಗಳಲ್ಲಿ ಅಗತ್ಯ ಔಷಧಗಳೊಂದಿಗೆ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಹಿರಿಯ ನಾಗರಿಕರಿಗೆ ಸರತಿ ಸಾಲಿನಿಂದ ವಿನಾಯಿತಿ ನೀಡಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಪುಟ್ಟ ಮಕ್ಕಳೊಂದಿಗೆ ಮತಗಟ್ಟೆಗೆ ಆಗಮಿಸಿದ ತಾಯಂದಿರಿಗಾಗಿ ಹಾಲುಣಿಸಲು ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು.

ಮೊದಲ ಮತದಾನ ಸಂಭ್ರಮದಲ್ಲಿ ಯುವ ಜನತೆ: ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿ ಯುವ ಜನರು ಸಂಭ್ರಮಪಟ್ಟರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕುರುಡಿಹಳ್ಳಿ ಗ್ರಾಮದ ಅನುಷಾ.ಹೆಚ್ ಮೊದಲ ಬಾರಿಗೆ ಮತ ಚಲಾಯಿಸಲು ಮತಗಟ್ಟೆ ಆಗಮಿಸಿದ್ದಳು. ಚಳ್ಳಕೆರಯ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾದ ಅನುಷಾ ಅಂಚೆ ಮೂಲಕ ತಲುಪಿದ ಮತದಾರ ಗುರುತಿನ ಚೀಟಿಯನ್ನ ಮತಗಟ್ಟೆ ಎದುರೇ ತೆರದು ಸಂಭ್ರಮಿಸಿದಳು. ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆಂಬ ಖುಷಿ ಇದೆ. ಮತದಾನ ಮಾಡಲು ನಮ್ಮ ಕಾಲೇಜಿನಲ್ಲಿ ತಿಳಿ ಹೇಳಿದ್ದಾರೆ. ದೇಶದ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದಳು.

ಚಳ್ಳಕೆರೆ ನಗರದ ಗಾಂಧಿನಗರ ನಿವಾಸಿಯಾದ ಮಹಾಲಕ್ಷ್ಮೀ  ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಮತ ಚಲಾಯಿಸಿ ಮತದಾನದ ಪ್ರಕ್ರಿಯೆಯ ಬಗ್ಗೆ ತುಂಬಾ ಕುತೂಹಲವಿದೆ. ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸದೃಢಗೊಳಿಸಲು, ನ್ಯಾಯ ಸಮ್ಮತವಾಗಿ ಯಾವುದೇ ರೀತಿಯ ಭಯ-ಭೀತಿ ಇಲ್ಲದೇ ದೇಶದ ಹಿತಕ್ಕಾಗಿ ನನ್ನ ಹಕ್ಕು ಚಲಾಯಿಸಿದ್ದೇನೆ. ಮುಂದೆಯೂ ಪ್ರತಿ ಚುನಾವಣೆಯಲ್ಲೂ ತಪ್ಪದೇ ಮತ ಚಲಾಯಿಸುವುದಾಗಿ ತಿಳಿಸಿದರು.

ಸಹಾಯಕ ಮತಗಟ್ಟೆ ಅಧಿಕಾರಿ ಯಶೋಧಮ್ಮ ನಿಧನ: ಚುನಾವಣಾ ಕರ್ತವ್ಯದಲ್ಲಿದ್ದ ಸಹಾಯಕ ಮತಗಟ್ಟೆ ಅಧಿಕಾರಿ ಯಶೋಧಮ್ಮ (58) ಹೃದಯಘಾತದಿಂದ ಮೃತಪಟ್ಟ ಘಟನೆ ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಮೇಗಳಗೊಲ್ಲರಹಟ್ಟಿಯಲ್ಲಿ ನಡೆಯಿತು.

ಮುಂಜಾನೆ ಮತದಾನದ ಆರಂಭದ ವೇಳೆಯಲ್ಲಿ ಯಶೋಧಮ್ಮನವರಿಗೆ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿದೆ. ಸ್ಥಳಕ್ಕೆ ಆಗಮಿಸಿದ ಸೆಕ್ಟರ್ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಆಸ್ಪತ್ರೆ ತಲುಪುವ ವೇಳೆಗಾಗಲೇ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಯಶೋಧಮ್ಮ ಮೃತಪಟ್ಟಿದ್ದಾರೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಆನಂದ ಮಾಹಿತಿ ನೀಡಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement