ಬೆಂಗಳೂರು: ಚೀನಿಯರು ನಮ್ಮಂತೆ ವಾದಿಸುವುದಿಲ್ಲ, ಹಾಗಾಗಿ ಚೀನಾ ವಿಶ್ವದ ಕಾರ್ಖಾನೆಯಾಯಿತು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ. ELCIA ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ನಾರಾಯಣ ಮೂರ್ತಿ ಅವರು, ‘ಚೀನಿಯರು ಶಿಸ್ತಿನವರು, ರಾಷ್ಟ್ರೀಯ ಅಭಿಮಾನ ಹೊಂದಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ನಮ್ಮಂತೆ ವಾದಿಸುವುದಿಲ್ಲ. ಹೀಗಾಗಿಯೇ ಚೀನಾ ವಿಶ್ವದ ಕಾರ್ಖಾನೆಯಾಗಿದೆ ಎಂದು ತಿಳಿಸಿದ್ದಾರೆ. “ಚೀನಾ ದೇಶವು ಭಾರತಕ್ಕಿಂತ 6x GDP ಹೊಂದಿದೆ. ಆದ್ದರಿಂದ, ನಾವು ಉತ್ಪಾದನಾ ಕೇಂದ್ರವಾಗುತ್ತೇವೆ ಎಂದು ಹೇಳುವುದು ಕಷ್ಟಕರ. ಉತ್ಪಾದನಾ ಕೇಂದ್ರವಾಗುವ ಭಾರತದ ಕನಸು ಇನ್ನು ಬಹಳ ದೂರದಲ್ಲಿದೆ. ಭಾರತವು ಚೀನಾವನ್ನು ಹಿಂದಿಕ್ಕಿ ಜಾಗತಿಕ ಉತ್ಪಾದನಾ ಕೇಂದ್ರವಾಗುವುದು ಸುಲಭವಲ್ಲ ಎಂದು ಹೇಳಿದರು. ಅಲ್ಲದೇ ಮೂರ್ತಿ ಅವರು “ಹಬ್” ಮತ್ತು “ವಿಶ್ವ ಗುರು” ನಂತಹ ಭವ್ಯವಾದ ಪದಗಳನ್ನು ಸುಖಾ ಸುಮ್ಮನೆ ಬಳಸದಂತೆ ಸಲಹೆ ನೀಡಿದರು. ಚೀನಾ ಈಗಾಗಲೇ ವಿಶ್ವದ ಕಾರ್ಖಾನೆಯಾಗಿದೆ. ಇತರ ದೇಶಗಳಲ್ಲಿನ ಸೂಪರ್ ಮಾರ್ಕೆಟ್‌ಗಳು ಮತ್ತು ಹೋಮ್ ಡಿಪೋಗಳಲ್ಲಿ ಸುಮಾರು 90% ರಷ್ಟು ವಸ್ತುಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ. ಅವರ ಆರ್ಥಿಕತೆ (ಜಿಡಿಪಿ) ಭಾರತಕ್ಕಿಂತ ಆರು ಪಟ್ಟು ದೊಡ್ಡದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಉತ್ಪಾದನಾ ಕೇಂದ್ರವಾಗಲಿದೆ ಎಂದು ಹೇಳುವುದು ದೊಡ್ಡ ವಿಷಯವಾಗಿದೆ ಎಂದು ಮೂರ್ತಿ ಹೇಳಿದರು.