ನವದೆಹಲಿ :ಮತದಾನದ ವೇಳೆ ಚುನಾವಣಾ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಕಾರಣ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಗುರುವಾರ ಬಂಧಿಸಲಾಗಿದೆ. ರಾಜಸ್ಥಾನದ ಡಿಯೋಲಿ-ಉನಿಯಾರಾ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ನಡೆದ ಉಪಚುನಾವಣೆ ಮತದಾನದ ವೇಳೆ ಈ ಘಟನೆ ನಡೆದಿದೆ.
ಬಂಧನಕ್ಕೂ ಕೆಲವೇ ನಿಮಿಷಗಳ ಮೊದಲು ಮೀನಾ, ವರದಿಗಾರರಿಗೆ “ನಾನು ಶರಣಾಗುವುದಿಲ್ಲ” ಎಂದು ಘೋಷಿಸಿದ್ದರು. ಸಂರವತ ಮತಗಟ್ಟೆಗೆ ತೆರಳಿದ್ದ ಮೀನಾ, ಚುನಾವಣಾ ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅವರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ಮಾಡದಂತೆ ತಡೆದಿದ್ದರು. ಪಕ್ಷದ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಮೀನಾ ಅವರನ್ನು ಕಳೆದ ವಾರ ಕಾಂಗ್ರೆಸ್ ಅಮಾನತುಗೊಳಿಸಿತ್ತು.