ಚಿತ್ರದುರ್ಗ: ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಈ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಾಳಿ, ಚುನಾವಣೆಯನ್ನು ಸಮರ, ಯುದ್ಧ ಎಂಬ ಮಾತುಗಳು ಸರಿಯಲ್ಲ. ನಾವೆಲ್ಲರೂ ಸಹೋದರರು. ಚುನಾವಣೆ ಸಂದರ್ಭದಲ್ಲಿ ಗೆಲುವಿಗಾಗಿ ಸ್ಪರ್ಧೆ ಅನಿವಾರ್ಯ. ಅದು ದ್ವೇಷಕ್ಕೆ ತಿರುಗಬಾರದು. ಜೊತೆಗೆ ಸಜ್ಜನಿಕೆ, ಎಲ್ಲ ಜನರ ಪ್ರೀತಿ ಗಳಿಸುವ ಗುಣ ರಾಜಕಾರಣಿಗಳಲ್ಲಿ ಹೆಚ್ಚಬೇಕು. ಸುಳ್ಳು, ಜಾತಿ, ಧರ್ಮಗಳನ್ನು ಮುಂದಿಟ್ಟು ಜನರ ಮನಸ್ಸು ಗೆಲ್ಲುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತಿಳಿಸಿದರು.
ಭಾರತ ವಿಶ್ವದಲ್ಲಿಯೇ ಅತ್ಯಂತ ಉನ್ನತ ಸಂಸ್ಕೃತಿ ಹೊಂದಿದ್ದು, ಪ್ರಾದೇಶಿಕವಾಗಿ ಭಿನ್ನವಾಗಿದ್ದರೂ ದೇವರು ಮತ್ತು ಜನರ ಮೇಲೆ ನಂಬಿಕೆ ಹೊಂದಿದ ವ್ಯಕ್ತಿ ಎಂದೂ ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಬಿ ಫಾರಂ ದೇವರ ಸನ್ನೀಧಿಯಲ್ಲಿಟ್ಟು ಪೂಜೆ ಸಲ್ಲಿಸಿ, ಬಳಿಕ ಯಾದವ, ಲಂಬಾಣಿ, ಕಬೀರಾನಂದಾ ಮಠ ಸೇರಿದಂತೆ ವಿವಿಧ ಮಠ ಹಾಗೂ ಧರ್ಮಗುರುಗಳನ್ನು ಭೇಟಿ ಮಾಡಿದ ಸಂದರ್ಭ ಮಾತನಾಡಿದರು.
ಯಾವುದೇ ಕೆಲಸ ಆರಂಭಿಸುವ ಮುನ್ನ ದೇವರು, ಧರ್ಮಗುರುಗಳು, ಹಿರಿಯರ ಆಶೀರ್ವಾದ ಪಡೆದು ಮುನ್ನಡೆಯುವುದು ನಮ್ಮ ಸಂಸ್ಕೃತಿ. ಆದ್ದರಿಂದ ಮಾಡಿದಷ್ಟು ನೀಡು ಭೀಕ್ಷೆ ಎಂಬ ಕಾಯಕ ತತ್ವ ಸಾರಿದ ಶ್ರೀಗುರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ಬಿ ಫಾರಂ ಗೆ ಪೂಜೆ ಸಲ್ಲಿಸಿ, ಬಳಿಕ ಗುರುಗಳು-ಹಿರಿಯರ ಆಶೀರ್ವಾದ ಪಡೆದು ಪ್ರಚಾರ ಕಾರ್ಯ ಆರಂಭಿಸುತ್ತಿದ್ದೆನೆ ಎಂದರು.
ನೂರಾರು ಜಾತಿ, ಹತ್ತಾರು ಧರ್ಮ, ವಿವಿಧ ಆಚರಣೆ, ಅನೇಕ ಭಾಷೆಗಳಲ್ಲಿ ಏಕತೆ ಹೊಂದಿರುವ ಭಾರತೀಯರ ಸಂಸ್ಕಾರ, ಸಂಸ್ಕೃತಿ, ನಡೆ-ನುಡಿ ಶ್ರೀಮಂತವಾಗಿದೆ. ಜೊತೆಗೆ ಇಲ್ಲಿನ ಜನರ ಸೌಹಾರ್ದ ಬದುಕು ಮಾದರಿ ಆಗಿದೆ. ಸ್ವಾಮಿ ವಿವೇಕಾನಂದ, ಬುದ್ಧ, ಬಸವ, ಕನಕ, ವಾಲ್ಮೀಕಿ, ಶ್ರೀಕೃಷ್ಣ, ಗಾಂಧೀಜಿ, ಅಂಬೇಡ್ಕರ್ ಸೇರಿ ಅನೇಕ ಮಹನೀಯರು, ಸಂತರು, ದಾರ್ಶನಿಕರ ಚಿಂತನೆಗಳು ನಾಡಿನ ಸೌಹಾರ್ದತೆಗೆ ಬುನಾದಿ ಆಗಿವೆ ಎಂದು ತಿಳಿಸಿದರು.
ಆದರೆ ಈಚೆಗೆ ಕೆಲವರು ರಾಜಕೀಯ ಕಾರಣಕ್ಕಾಗಿ ಈ ಸೌಹಾರ್ಧತೆ ಹಾಗೂ ಶಾಂತಿಯ ನಾಡಿನಲ್ಲಿ ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ನಾಗರಿಕರ ಮೇಲೆ ಇದೆ ಎಂದು ಹೇಳಿದರು.
ಜನರು ಹೆಚ್ಚು ಪ್ರಜ್ಞಾವಂತರು ಎಂಬುದನ್ನು ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶವೇ ಸ್ಪಷ್ಟ ಉದಾಹರಣೆ. ಎಷ್ಟೇ ಅಬ್ಬರ, ಸುಳ್ಳುಗಳು, ರಂಗು-ರಂಗು ಪ್ರಚಾರಕ್ಕೆ ಜನರು ಮಾರು ಹೋಗುವುದಿಲ್ಲ ಎಂಬುದು ದೃಢಪಟ್ಟಿದೆ. ಸತ್ಯ-ಸುಳ್ಳು ಯಾವುದು, ಯಾವ ಪಕ್ಷ, ಯಾವ ನಾಯಕರು ಜನರ ಹಿತ ಬಯಸುತ್ತಾರೆ ಎಂಬ ಚಿಂತನೆ ಮಾಡಿ ಮತ ಚಲಾಯಿಸುತ್ತಾರೆ. ಆದ್ದರಿಂದಲೇ ಕಾಂಗ್ರೆಸ್ ಪಕ್ಷ ಎಲ್ಲರ ನಿರೀಕ್ಷೆ ಮೀರಿ ರಾಜ್ಯದಲ್ಲಿ 135 ಸ್ಥಾನ ಗೆದ್ದು, ಜನಪರ ಆಡಳಿತ ನೀಡಲು ಸಾಧ್ಯವಾಗಿದೆ. ಇದು ಲೋಕಸಭಾ ಚುನಾವಣೆ ಫಲಿತಾಂಶದಲ್ಲೂ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐದು ಗ್ಯಾರಂಟಿ ಯೋಜನೆಗಳು ಜಾರಿ ಸಾಧ್ಯವೇ ಇಲ್ಲ ಎಂದವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಟೀಕೆ ಮಾಡುತ್ತಿದ್ದಂತೆ ಪ್ರತಿಪಕ್ಷದವರು ನಿದ್ದೆಗೆಟ್ಟಿದ್ದಾರೆ. ಇಡೀ ದೇಶಕ್ಕೆ ಕರ್ನಾಟಕ ರಾಜ್ಯದ ಆಡಳಿತ, ಇಲ್ಲಿನ ಯೋಜನೆಗಳು ಮಾದರಿ ಆಗಿವೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದವರೇ ಇದೆಲ್ಲ ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಲ್ಲಿನ ಅಪಾರ ಜ್ಞಾನ, ಡಿ.ಕೆ.ಶಿವಕುಮಾರ್ ಅವರಲ್ಲಿನ ಸಂಘಟನೆ ಇದೆಲ್ಲವನ್ನೂ ಸಾಧ್ಯವಾಗಿಸಿದೆ. ಯಾರೇ ಒಳ್ಳೆಯ ಕೆಲಸ ಮಾಡಲಿ ಅದನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಆ ವ್ಯಕ್ತಿ ನಿಜವಾದ ರಾಜಕಾರಣಿ ಆಗಲು ಸಾಧ್ಯ. ಆದರೆ ಗ್ಯಾರಂಟಿ ಯೋಜನೆಗಳ ಯಶಸ್ಸು ಕಂಡು ಪ್ರತಿ ಪಕ್ಷದವರು ಅಸೂಯೆ ಪಡುತ್ತಿರುವುದು ರಾಜಕಾರಣಿಗಳ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ 25 ಮಂದಿ ಕೂಡ ಸ್ಪರ್ಧೆಗೆ ಅರ್ಹರಿದ್ದರು. ಆದರೆ ಪಕ್ಷ ಎಲ್ಲ ರೀತಿಯ ಚಿಂತನೆ ನಡೆಸಿ ನನಗೆ ಅವಕಾಶ ಮಾಡಿಕೊಟ್ಟಿದೆ. ಉಳಿದವರಿಗೆ ಪಕ್ಷ ಬೇರೆ ರೀತಿ ಸ್ಥಾನಮಾನ ಕೊಡಲಿದೆ. ಅದಕ್ಕೆ ಮುಖ್ಯವಾಗಿ ಪಕ್ಷನಿಷ್ಠೆ ಅಗತ್ಯ. ಈಗಾಗಲೇ ಬಹಳಷ್ಟು ಮಂದಿಗೆ ಮಂಡಳಿ-ನಿಗಮದಲ್ಲಿ ಸ್ಥಾನಮಾನ ನೀಡಿದೆ. ರಾಜಕಾರಣದಲ್ಲಿ ತಾಳ್ಮೆ ಮುಖ್ಯ ಎಂದು ಹೇಳಿದರು.
ಕ್ಷೇತ್ರದಲ್ಲಿ ಏಳು ಮಂದಿ ಶಾಸಕರು, ಹಾಲಿ-ಮಾಜಿ ಸಚಿವರು, ನೂರಾರು ಮುಖಂಡರು, ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರ ಪಡೆ ಇದೆ. ಈಗಾಗಲೇ ಇವರೆಲ್ಲರೂ ಚುನಾವಣೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದರು.
ಇಂದು 2024ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿ.ಫಾರಂ ಪಡೆದ ನಂತರ ಅಧಿಕೃತ ಬಿ.ಫಾರಂನೊಂದಿಗೆ ಶ್ರೀಕ್ಷೇತ್ರ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸ್ವಾಮಿಯಲ್ಲಿ ಮುಂದಿನ ಯಶಸ್ಸಿಗಾಗಿ ಪ್ರಾರ್ಥಿಸಿದೆನು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ನಾಗೇಶ್ ರೆಡ್ಡಿಯವರು, ಎಸ್ ಟಿ ಸೆಲ್ ಜಿಲ್ಲಾಧ್ಯಕ್ಷರಾದ ಶ್ರೀ ಜಯಣ್ಣನವರು, ಕಾಂಗ್ರೆಸ್ ಮುಖಂಡರುಗಳಾದ ಪ್ರಭುಸ್ವಾಮಿ, ಯೂಸುಫ್, ಜಗದೀಶ್, ಮಲ್ಲೇಶ್, ನಾಗರಾಜ್, ಮಲ್ಲೇಶ್, ಬಂಡೆ ಓಬಣ್ಣ, ರಾಜು, ಮಂಜಕ್ಕ,ಹನುಮಂತಪ್ಪ, ಶಿವಾರೆಡ್ಡಿ,ವಿಶ್ವನಾಥ್ ರೆಡ್ಡಿ.ಗೊರಸಮುದ್ರ ಓಬಣ್ಣ,ಮುದಿಯಪ,ಬಸಣ್ಣ,ಕಾಟಯ್ಯ. ಶ್ರೀಕಾಂತ್ ಹಾಗೂ ಇನ್ನಿತರರು ಹಾಜರಿದ್ದರು.