ನವದೆಹಲಿ : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಎಂದು ಹೇಳಿ, ದೇಶದ ಮಹಿಳೆಯರ ಖಾತೆಗೆ ನೇರವಾಗಿ ಹಣ ಹಾಕುವ ಭರವಸೆಯನ್ನು ನೀಡಲಾಗಿತ್ತು. ಅಲ್ಲದೇ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ ‘ಖಟಾಖಟ್’ ಚರ್ಚೆಗೆ ಒಳಗಾಗಿತ್ತು. ಇದೀಗ ಈ ವಿಚಾರ ರಾಷ್ಟ್ರಪತಿ ಅಂಗಳಕ್ಕೆ ಬಂದಿದೆ. ದೆಹಲಿ ಮೂಲದ ವಕೀಲ ವಿಬೋರ್ ಆನಂದ್ ಎಂಬುವರು ಈ ಕುರಿತಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಪ್ರಜಾ ಪ್ರತಿನಿಧಿ ಕಾಯ್ದೆ ಸೆಕ್ಷನ್ 123 (1) ಅನ್ವಯ ಮತದಾರರಿಗೆ ಆಮಿಷ ಒಡ್ಡುವುದು ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಆಯ್ಕೆಯಾಗಿರುವ 99 ‘ಕೈ’ ಶಾಸಕರನ್ನು ಅನರ್ಹಗೊಳಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. 10 ಪುಟಗಳ ಪತ್ರವನ್ನು ದೆಹಲಿ ಮೂಲದ ಈ ವಕೀಲರು ರಾಷ್ಟ್ರಪತಿಯವರಿಗೆ ಬರೆದಿದ್ದು, ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 146 ರ ಅನ್ವಯ ಕೇಂದ್ರ ಚುನಾವಣಾ ಆಯೋಗ, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲರ ವಿರುದ್ಧವೂ ತನಿಖೆ ನಡೆಸಲು ಸೂಚಿಸುವಂತೆ ಕೋರಿದ್ದಾರೆ. ಕಾಂಗ್ರೆಸ್ ನಾಯಕರು ಸಹಿ ಮಾಡಿದ ಗ್ಯಾರಂಟಿ ಕಾರ್ಡುಗಳನ್ನು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ವಿತರಿಸಲಾಗಿತ್ತು. ಅಲ್ಲದೆ ಜೂನ್ 4ರ ಚುನಾವಣಾ ಫಲಿತಾಂಶದ ಮರುದಿನವೇ ಪ್ರತಿಯೊಬ್ಬರ ಖಾತೆಗೆ 8,500 ರೂಪಾಯಿಗಳನ್ನು ಪಾವತಿಸಲಾಗುತ್ತದೆ ಎಂದು ಸುಳ್ಳು ಭರವಸೆಯನ್ನು ನೀಡಲಾಗಿತ್ತು ಎಂದು ಆರೋಪಿಸಿರುವ ವಕೀಲರು, ಈಗ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಎಲ್ಲ ಸಂಸದರನ್ನು ಅನರ್ಹಗೊಳಿಸಲು ಕೋರಿ ಮನವಿ ಮಾಡಿದ್ದಾರೆ.
