ಎಂಎಲ್ಎ ಟಿಕೆಟ್ ಕೊಡಿಸೋದಾಗಿ ಐದು ಕೋಟಿ ರೂಪಾಯಿ ವಂಚನೆ ಪ್ರಕರಣ ಎದುರಿಸುತ್ತಿರುವ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಹಣ ವಂಚನೆ ಪ್ರಕರಣ ದಾಖಲಾಗಿದೆ.
ಕೋಟ ಪೋಲಿಸ್ ಠಾಣೆಯಲ್ಲಿ ಚೈತ್ರಾ ಗೆಳೆಯನೊಬ್ಬನಿಂದಲೇ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಐದು ಲಕ್ಷ ರೂಪಾಯಿ ವಂಚಿಸಿ ಬಳಿಕ ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ.
ಆರೋಪಿ ಚೈತ್ರಾ ಕುಂದಾಪುರ 2015 ರಲ್ಲಿ ಸುದಿನ ಎಂಬವರಿಗೆ ಪರಿಚಯವಾಗಿದ್ದು, ತಾನು ಬಿಜೆಪಿ ಪಕ್ಷದಲ್ಲಿ, ಉನ್ನತ ಸ್ಥಾನದಲ್ಲಿ, ಹಲವು ಮಂತ್ರಿಗಳು, ಸಚಿವರ ಹಾಗೂ ಶಾಸಕರ ನಿಕಟ ಸಂಪರ್ಕದಲ್ಲಿರುವುದಾಗಿ ನಂಬಿಸಿದ್ದಳು ಎನ್ನಲಾಗಿದೆ.
ಬಳಿಕ ಉಡುಪಿ ಹಾಗೂ ಕೋಟದಲ್ಲಿ ಬಟ್ಟೆ ಅಂಗಡಿಯನ್ನು ಹಾಕಿ ಕೊಡುವುದಾಗಿ ಸುದಿನ ಅವರಿಂದ 2018 ರಿಂದ 2022 (3) ರವರೆಗೆ 5 ಲಕ್ಷ ಹಣವನ್ನು ಪಡೆದಿದ್ದಳು. ಆ ನಂತರ ಪ್ರತಿ ಬಾರಿ ಅಂಗಡಿ ಹಾಕುವ ಬಗ್ಗೆ ಸುದಿನಾ ಅವರು ಕೇಳಿದಾಗ ಆರೋಪಿ ಚೈತ್ರಾ ದಿನಗಳನ್ನು ಮುಂದೂಡುತ್ತಾ ಹಾಗೂ ಇನ್ನಷ್ಟು ಹಣ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ.
ಇದರಿಂದ ಅನುಮಾನಗೊಂಡು ಸುದಿನ ಅವರು ಅಂಗಡಿಯನ್ನು ಹಾಕಿ ಕೊಡುವಂತೆ ಕೇಳಿಕೊಂಡಾಗ ಆರೋಪಿ ಚೈತ್ರಾ ಅತ್ಯಾಚಾರ ಪ್ರಕರಣವನ್ನು ದಾಖಲಿಸುವುದಾಗಿ ಮತ್ತು ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾಳೆ ಎಂದು ಆರೋಪಿಸಲಾಗಿದೆ.
ದೂರಿಗೆ ಸಂಬಂಧಿಸಿದಂತೆ ಕೋಟ ಪೋಲಿಸ್ ಠಾಣೆಯಲ್ಲಿ ಚೈತ್ರಾ ಕುಂದಾಪುರ ವಿರುದ್ಧ ಅ.ಕ್ರ.ಸಂ. 180/2023 ರಂತೆ IPC 1860 (506,420,417) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.