ಚೈತ್ರಾ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಚೈತ್ರಾ ಕುಂದಾಪುರ ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ನನ್ನ ಹೆಸರು ಬಂದಿರುವುದು ಬೇಸರವಾಗಿದೆ, ಹಣದ ವಿಚಾರದಲ್ಲಿ ನನಗೇನೂ ಗೊತ್ತಿಲ್ಲ. ಚೈತ್ರಾಳ ಪರಿಚಯ ಇದ್ದಿದ್ದೂ ಹೌದು, ಹಾಗಂತ ಆಕೆಯ ಜೊತೆಗೆ ಬೇರೇನೂ ಸಂಪರ್ಕ, ಮಾತುಕತೆ, ವಹಿವಾಟು ಇಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು, ಚೈತ್ರಾ ಜೊತೆ ಸಂಪರ್ಕ ಇದ್ದಿದ್ದರಿಂದ ಆಕೆಗೆ ಫೋನ್ ಮಾಡಿ ಸ್ಪಷ್ಟನೆ ಕೇಳಿದ್ದೆ. ಮೂರು ಕೋಟಿ ದುಡ್ಡಿನ ಬಗ್ಗೆ ಕೇಳಿದಾಗ, ಒಂದೂವರೆ ಇದ್ದಿದ್ದು ಮೂರು ಕೋಟಿ ಆಯ್ತಾ? ಇನ್ನು ಅದು 4-5 ಕೋಟಿ ಆಗಬಹುದು ಎಂದು ಆಕೆ ಹೇಳಿದ್ದಳು. ಸತ್ಯ ಹೇಳು ಎಂದಿದ್ದೆ ಆಕೆ ತನಗೇನೂ ಗೊತ್ತಿಲ್ಲ ಎಂದಿದ್ದರು, ಚಕ್ರವರ್ತಿ ಸೂಲಿಬೆಲೆ ಅವರಿಗೂ ಫೋನ್ ಮಾಡಿದ್ದೆ ಎಂದರು.
ಜುಲೈ ತಿಂಗಳಲ್ಲಿ ಹಿಂದೂ ಸಂಘಟನೆಯ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿದ್ದರು. ಗೋವಿಂದ ಪೂಜಾರಿ ಟಿಕೆಟ್ ವಿಚಾರದಲ್ಲಿ ನನಗೆ ಪ್ರಶ್ನೆ ಮಾಡಿದ್ದರು, ಆದರೆ ನನಗೇನೂ ತಿಳಿದಿರಲಿಲ್ಲ. ನನ್ನಲ್ಲಿ ಯಾಕೆ ಪ್ರಶ್ನೆ ಮಾಡುವುದೆಂದು ಕೇಳಿದ್ದೆ. ಬಳಿಕ ಅವರೇ ಫೋನ್ ಮಾಡಿ, ಚೈತ್ರಾ, ಅಭಿನವ ಹಾಲಶ್ರೀ ಹೆಸರಿದೆ ಎಂದು ಹೇಳಿದ್ದರು.
ಅಭಿನವ ಹಾಲಶ್ರೀ ಸ್ವಾಮೀಜಿ ಸೂಲಿಬೆಲೆ ಜೊತೆಗೆ ಗುರುತಿಸಿದ್ದರಿಂದ ಅವರಿಗೂ ವಿಷಯ ತಿಳಿಸಿದ್ದೆ. ನಾವು ವಿಶ್ವ ಹಿಂದು ಪರಿಷತ್ತಿನಲ್ಲಿ ಗುರುತಿಸಿದ್ದರಿಂದ ಶರಣ್ ಪಂಪ್ವೆಲ್ ಅವರಿಗೂ ವಿಷಯ ತಿಳಿಸಿದ್ದೇವೆ. ನಿಮಗೇನೂ ಸಂಪರ್ಕ ಇಲ್ಲಾಂದ್ರೆ ನೀವ್ಯಾಕೆ ತಲೆ ಬಿಸಿ ಮಾಡ್ತೀರಿ ಎಂದು ಶರಣ್ ಹೇಳಿದ್ದರು. ಈಗ ನನ್ನ ಹೆಸರನ್ನು ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ಚೈತ್ರಾ ಕುಂದಾಪುರ ಉಲ್ಲೇಖಿಸಿದ್ದು ಬೇಸರವಾಗಿದೆ ಎಂದರು.